ಗದಗ: ಪಡಿತರ ಬರುವ ಅಕ್ಕಿ ಪ್ಲಾಸ್ಟಿಕ್‌ ಅಲ್ಲ; ಸಾರವರ್ಧಿತ ಕಾಳು

ಗದಗ (ಜೂ.15) : ಅನ್ನಭಾಗ್ಯ ಯೋಜನೆಯಡಿ ಅಪೌಷ್ಟಿಕತೆ ಹೋಗಲಾಡಿಸಲು ಪ್ರತಿ ಮಾಹೆಯಲ್ಲಿ ಸರ್ಕಾರದ ಆದೇಶದಂತೆ ಪ್ರತಿ 1 ಕ್ವಿಂಟಲ್‌ ಪಡಿತರ ಅಕ್ಕಿಯಲ್ಲಿ 1ಕೆಜಿ ಸಾರವರ್ಧಿತ ಅಕ್ಕಿಯನ್ನು ಮಿಶ್ರಣ ಮಾಡಿ ಪೂರೈಸಲಾಗುತ್ತಿದೆ. ಸಾರ್ವಜನಿಕರು, ಪಡಿತರ ಫಲಾನುಭವಿಗಳು ಮಿಶ್ರಣವಾದ ಸಾರವರ್ಧಿತ ಅಕ್ಕಿಯನ್ನು ಪ್ಲಾಸ್ಟಿಕ್‌ ಅಕ್ಕಿ ಎಂದು ಭಾವಿಸಿ ಗೊಂದಲಕ್ಕೀಡಾಗುತ್ತಿರುವುದು ತಿಳಿದುಬಂದಿದೆ.

ಇದು ಪ್ಲಾಸ್ಟಿಕ್‌ ಅಕ್ಕಿ ಅಲ್ಲ. (ಕೃತಕ ಕಾಳು- ಇದು ನಿಜವಾದ ಅಕ್ಕಿ ಅಲ್ಲ. ಅಕ್ಕಿ ರೂಪದಲ್ಲಿ ವಿನ್ಯಾಸಗೊಳಿಸಲಾದ ಸಾರವರ್ಧಿತ ಕಾಳು. ಕಬ್ಬಿಣಾಂಶ, ಸತು, ಪೋಲಿಕ್‌ ಆ್ಯಸಿಡ್‌, ವಿಟಮಿನ್‌ ಎ, ವಿಟಮಿನ್‌ ಬಿ 12 ಮೊದಲಾದ ಅಂಶಗಳ್ನು ಬೆರೆಸಿ ಅದಕ್ಕೆ ಅಕ್ಕಿಯ ಕಾಳಿನ ರೂಪ ಕೊಡಲಾಗಿದೆ). ಈ ಸಾರವರ್ಧಿತ ಅಕ್ಕಿಯು ಪಡಿತರ ಅಕ್ಕಿಗಿಂತ ನೋಡಲು ಸ್ವಲ್ಪ ದಪ್ಪ, ಉದ್ದ ಇದ್ದು ಅಕ್ಕಿಯನ್ನು ತೊಳೆಯುವ ಸಮಯದಲ್ಲಿ ನೀರಿನಲ್ಲಿ ಸ್ವಲ್ಪ ಹೊತ್ತು ತೇಲುವುದರಿಂದ ಇದನ್ನು ಪ್ಲಾಸ್ಟಿಕ್‌ ಅಕ್ಕಿ ಎಂದು ತಿಳಿದುಕೊಂಡು ಗೊಂದಲ ಮಾಡಿಕೊಳ್ಳಬಾರದು.