ಪುನರ್ವಸತಿ ಕೇಂದ್ರ ಸೇರಿದ್ದ ನಂಜನಗೂಡು ದೇಗುಲದ ಗೌರಿ ಆನೆ: ವಾಪಸ್ ತರಲು ಅಭಿಯಾನ

ಮೈಸೂರು: 5 ವರ್ಷದ ಹಿಂದೆ ಚಿಕಿತ್ಸೆಗೆ ಅಂತ ಕರೆದುಕೊಂಡು ಹೋಗಿದ್ದ ದಕ್ಷಿಣಕಾಶಿ ನಂಜನಗೂಡು ದೇಗುಲದ ಗೌರಿ ಆನೆ ಗೌರಿ ಆನೆಯನ್ನು ವಾಪಸ್ ತರುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಶುರುವಾಗಿದೆ. ಗೌರಿ ಆನೆ ನಂಜನಗೂಡು ದೇಗುಲದ ಭಾಗವಾಗಿದ್ದು, ಪ್ರತಿದಿನ ಅಭಿಷೇಕಕ್ಕೆ ಗೌರಿ ಆನೆಯ ಮೇಲೆ ಕಪಿಲೆಯ ನೀರು ತರಲಾಗುತಿತ್ತು. ಅಲ್ಲದೇ ಗೌರಿ ಆನೆ ಉತ್ಸವ ಮೆರವಣಿಗೆಯಲ್ಲಿ ಮಂಚೂಣಿಯಲ್ಲಿರುತ್ತಿತ್ತು. ಇದೀಗ ಗೌರಿ ಆನೆ ಇಲ್ಲದೆ ಒಂದು ಕಡೆ ಸಂಪ್ರದಾಯಕ್ಕೆ ಬ್ರೇಕ್ ಬಿದ್ದಿದ್ದು, ಮತ್ತೊಂದು ಕಡೆ ಆನೆಯಿಲ್ಲದೆ ದೇಗುಲ ಆಕರ್ಷಣೆ ಕಳೆದುಕೊಂಡಿದೆ.

ಹೀಗಾಗಿ ಆನೆ ವಾಪಸ್ಸು ಕರೆತರುವಂತೆ ಸ್ಥಳೀಯರ ಒತ್ತಾಯಿಸಿದ್ದು, ಕೋಟಿ ಆದಾಯವಿರುವ ನಂಜನಗೂಡು ದೇಗುಲ ಆನೆ ಸಾಕಲು ಹಿಂದೇಟು ಹಾಕುತ್ತಿದೆ ಎಂದು ಆರೋಪ ಕೇಳಿಬರುತ್ತಿದೆ. ಈ ಬಗ್ಗೆ ಕೂಡಲೇ ಕ್ರಮ ಜರುಗಿಸುವಂತೆ ಸ್ಥಳೀಯರು ಒತ್ತಾಯಿಸಿದ್ದರು.

2018ರಲ್ಲಿ ಶ್ರೀ ಶ್ರೀಕಂಠೇಶ್ವರ ಸ್ವಾಮಿ ದೇವಸ್ಥಾನದ ಗೌರಿ ಎಂಬ ಹೆಸರಿನ ಆನೆಯ (39) ಎರಡು ಕಾಲಿಗೆ ಗಾಯವಾಗಿದ್ದು, ತಿರುಗಾಡಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಪಶುವೈದ್ಯರು ನಿಯಮಿತವಾಗಿ ಚಿಕಿತ್ಸೆ ನೀಡುತ್ತಿದ್ದರೂ ಗಾಯಗಳು ವಾಸಿಯಾಗದೆ ಆನೆ ಗೌರಿ ಹೆಚ್ಚು ನರಳಡುತ್ತಿತ್ತು.

ಈ ಹಿನ್ನೆಲೆ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಅವರ ನಿರ್ದೇಶನದ ಮೇರೆಗೆ ದೇವಾಲಯದ ಅಧಿಕಾರಿಗಳು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಗೌರಿಯನ್ನು ಟ್ರಕ್‌ನಲ್ಲಿ ಕೋಲಾರ ಜಿಲ್ಲೆಯ ಮಾಲೂರಿನ ವನ್ಯಜೀವಿ ರಕ್ಷಣಾ ಮತ್ತು ಪುನರ್ವಸತಿ ಕೇಂದ್ರಕ್ಕೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಲಾಗುತ್ತಿದೆ. ಗೌರಿ ಜೊತೆಗೆ ಮಾವುತರಾದ ಪ್ಯಾರೆ ಜಾನ್ ಮತ್ತು ಬಶೀರ್ ಗಡೇಕರ್ ಹೋಗಿದ್ದಾರೆ.

ದೇವಸ್ಥಾನದಲ್ಲಿರುವಾಗ ಗೌರಿ ಪ್ರತಿದಿನ ಕಪಿಲಾ ನದಿಯಿಂದ ಶ್ರೀಕಂಠೇಶ್ವರ ಸ್ವಾಮಿ ಅಭಿಷೇಕಕ್ಕಾಗಿ ನೀರು ತರುತ್ತಿತ್ತು. ಮತ್ತು ಜಾತ್ರಾ ಮಹೋತ್ಸವಗಳಲ್ಲಿ ಭಾಗವಹಿಸುವುದರ ಜೊತೆಗೆ ದೇವಾಲಯದಲ್ಲಿ ವಿವಿಧ ಧಾರ್ಮಿಕ ವಿಧಿವಿಧಾನಗಳಲ್ಲಿ ಭಾಗವಹಿಸುತ್ತಿತ್ತು.

ಇದೀಗ ಗೌರಿ ಆನೆ ಇಲ್ಲದೆ ತಂಗಿದ್ದ ದೇವಸ್ಥಾನದ ಮುಂಭಾಗದ ಶೆಡ್ ಖಾಲಿಯಾಗಿದ್ದು, ಗೌರಿಯ ದರ್ಶನಕ್ಕೆ ಆಗಾಗ ಬರುತ್ತಿದ್ದ ಭಕ್ತರು, ಶಾಲಾ ಮಕ್ಕಳು ಸೇರಿದಂತೆ ಇನ್ನಿತರರು ನಿರಾಸೆಯಿಂದ ತೆರಳುತ್ತಿದ್ದಾರೆ.