ಬೆಂಗಳೂರಿನ ಟ್ರಾಫಿಕ್ ನಡುವೆ ಸಿಲುಕಿಕೊಂಡಿದ್ದ ದ್ವಿಚಕ್ರ ವಾಹನ ಸವಾರರೊಬ್ಬರು, ಟ್ರಾಫಿಕ್ ಮಧ್ಯೆಯೇ ತಮ್ಮ ಮೊಬೈಲ್ ಫೋನ್ ಮುಖಾಂತರ ಆನ್ಲೈನ್ ಕಾನ್ಫರೆನ್ಸ್ ಮೀಟಿಂಗ್ಗೆ ಹಾಜರಾಗಿದ್ದಾರೆ. ಸದ್ಯಕ್ಕೆ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.
ಬೆಂಗಳೂರು, ಮುಂಬೈನಂತಹ ಮಹಾನಗರಗಳಲ್ಲಿ ಟ್ರಾಫಿಕ್ ತಲೆನೋವು ಇದ್ದೇ ಇರುತ್ತದೆ. ಟ್ರಾಫಿಕ್ನಲ್ಲಿ ಸಿಲುಕಿಕೊಂಡಿದ್ದು ಆಫೀಸ್ಗೆ ತಡವಾಗಿ ಹೋಗಲು ಅಥವಾ ಮೀಟಿಂಗ್ಗಳಿಗೆ ತಡವಾಗಿ ಬರಲು ಸಾಧ್ಯವಿಲ್ಲ. ಹೇಗಾದರೂ ಸರಿ ಕೆಲಸ ಕಾರ್ಯಗಳನ್ನು ಸಮಯಕ್ಕೆ ಸರಿಯಾಗಿ ಮಾಡಲೇಬೇಕು. ಇನ್ನು ಸುದೀರ್ಘ ಸಮಯ ಟ್ರಾಫಿಕ್ ಜಾಮ್ ನಡುವೆ ಸಿಲುಕಿಕೊಂಡಿರುವಾಗ ಅನೇಕ ಜನರು ಸಮಯವನ್ನು ವ್ಯರ್ಥ ಮಾಡಲು ಬಯಸದೆ ಟ್ರಾಫಿಕ್ನಲ್ಲಿಯೇ ತಮ್ಮ ಲ್ಯಾಪ್ ಟಾಪ್, ಸ್ಮಾರ್ಟ್ ಫೋನ್ಗಳನ್ನು ಹೊರತೆಗೆದು ಆನ್ಲೈನ್ನಲ್ಲಿಯೇ ಕೆಲಸವನ್ನು ಮಾಡುತ್ತಾರೆ. ಅದೇ ರೀತಿ ಬೆಂಗಳೂರಿನ ಟ್ರಾಫಿಕ್ನಲ್ಲಿ ಸಿಲುಕಿಕೊಂಡ ವ್ಯಕ್ತಿಯೊಬ್ಬರು ತಮ್ಮ ಸ್ಮಾರ್ಟ್ ಫೋನ್ ಮೂಲಕ ಆಫೀಸಿನ ಮೀಟಿಂಗ್ಗೆ ಹಾಜರಾಗಿದ್ದಾರೆ. ಅದೂ ಕೂಡಾ ತಮ್ಮ ದ್ವಿಚಕ್ರ ವಾಹನದ ಮೇಲೆ ಮೊಬೈಲ್ ಹೋಲ್ಡರ್ ಇಟ್ಟು ಅದರ ಮೇಲೆ ತಮ್ಮ ಮೊಬೈಲ್ ಇಟ್ಟು ಮೀಟಿಂಗ್ಗೆ ಹಾಜರಾಗಿದ್ದಾರೆ. ಈ ವೈರಲ್ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ವೈಭವ್ ಎಂಬವರು ವ್ಯಕ್ತಿಯೊಬ್ಬರು ಟ್ರಾಫಿಕ್ ತಲೆಬಿಸಿ ಮಧ್ಯೆ ಮೀಟಿಂಗ್ಗೆ ಹಾಜರಾಗಿರುವ ಫೋಟೋವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವೈರಲ್ ಫೋಟೋದಲ್ಲಿ ಬೈಕ್ನಲ್ಲಿ ಕುಳಿತಿದ್ದ ವ್ಯಕ್ತಿ ಬೈಕ್ ಕನ್ನಡಿಯ ಪಕ್ಕ ಮೊಬೈಲ್ ಹೋಲ್ಡರ್ ಇಟ್ಟು ಅದರ ಮೇಲೆ ತನ್ನ ಸ್ಮಾರ್ಟ್ ಫೋನ್ ಇಟ್ಟು ಆಫೀಸಿನ ಕಾನ್ಫರೆನ್ಸ್ ಮೀಟಿಂಗ್ನಲ್ಲಿ ನಿರತವಾಗಿರುವುದನ್ನು ಕಾಣಬಹುದು.