ʼಶಕ್ತಿʼ ಯೋಜನೆ ಘೋಷಣೆಯಾದ 2ನೇ ದಿನವೇ ಮಹಿಳೆಯರ ಪರದಾಟ – ಬಸ್ ಫುಲ್ ರಶ್

ರಾಮನಗರ: ಶಕ್ತಿ ಯೋಜನೆ ಘೋಷಣೆಯಾದ ಎರಡನೇ ದಿನವೇ ಪ್ರಯಾಣಿಕರ ಪರದಾಟ ನಡೆಸಿದ ಘಟನೆ ರಾಮನಗರದಲ್ಲಿ ಬಸ್ ನಿಲ್ದಾಣದಲ್ಲಿ ನಡೆದಿದೆ.

ಬಸ್ ಹತ್ತಲಾಗದೇ ಪ್ರಯಾಣಿಕರು ಪರದಾಡಿದ್ದಾರೆ. ಬೆಂಗಳೂರು ಕಡೆಗೆ ಹೋಗುವ ಬಸ್‌ಗಳು ಫುಲ್ ರಶ್ ಆಗಿದ್ದು, ನಿತ್ಯ ಕೆಲಸಕ್ಕೆ ಹೋಗುವವರು, ಕಾಲೇಜು ವಿದ್ಯಾರ್ಥಿಗಳು ಬಸ್ ಹತ್ತಲಾಗದೇ ಪರದಾಡಿದ್ದಾರೆ.

ಬಸ್ ರಶ್ ಆಗಿದ್ರೂ ಕೆಲವರು ಡೋರ್‌ನಲ್ಲೇ ನಿಂತು ಪ್ರಯಾಣ ಮಾಡಿದ್ದಾರೆ. ಸರಿಯಾದ ಪ್ರಮಾಣದಲ್ಲಿ ಬಸ್ ವ್ಯವಸ್ಥೆ ಮಾಡದ ಕೆಎಸ್‌ಆರ್‌ಟಿಸಿ ಅಧಿಕಾರಿಗಳ ವಿರುದ್ಧ ಕಿಡಿಕಾರಿದ ಮಹಿಳೆಯರು, ಉಚಿತ ಪ್ರಯಾಣಕ್ಕೆ ಅವಕಾಶ ಕೊಟ್ರೆ ಸಾಲದು. ಸಮರ್ಪಕ ಬಸ್ ವ್ಯವಸ್ಥೆ ಮಾಡುವಂತೆ ಒತ್ತಾಯಿಸಿದ್ದಾರೆ.

ರೈಲಿನಲ್ಲಿ ಸಂಚರಿಸುತ್ತಿದ್ದ ಮಹಿಳಾ ಪ್ರಯಾಣಿಕರು ಶಕ್ತಿ ಯೋಜನೆ ಅನುಕೂಲ ಪಡದುಕೊಳ್ಳಲು ಕೆಎಸ್‌ಆರ್‌ಟಿಸಿ ಬಸ್ ಕಡೆ ಮುಖ ಮಾಡಿರೋದು ಬಸ್ ರಶ್ ಆಗಿರೋದಕ್ಕೆ ಕಾರಣ ಎನ್ನಲಾಗುತ್ತಿದೆ. ಇದರಿಂದಾಗಿ ಪುರುಷ ಪ್ರಯಾಣಿಕರು ಪರದಾಡುವ ಪರಿಸ್ಥಿತಿ ನಿರ್ಮಾಣ ಆಗಿದೆ. ಅಲ್ಲದೇ ಪ್ರಯಾಣಿಕರ ಸಂಖ್ಯೆ ಇನ್ನೂ ಹೆಚ್ಚಳವಾಗುವ ಸಾಧ್ಯತೆ ಇದ್ದು, ಅಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಸ್ ನಿಯೋಜಿಸುಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.