ಜಮ್ಮು-ಕಾಶ್ಮೀರದಿಂದ UPSC CAPF ತೇರ್ಗಡೆಯಾದ ಮೊದಲ ಮಹಿಳೆ ಸಿಮ್ರಾನ್‌ ಬಾಲಾ

ಶ್ರೀನಗರ: ಜಮ್ಮು-ಕಾಶ್ಮೀರದ ನೌಶೆರಾ ಪಟ್ಟಣದ ನಿವಾಸಿ ಸಿಮ್ರಾನ್‌ ಬಾಲಾ ಅವರು ಕೇಂದ್ರ ಲೋಕಸೇವಾ ಆಯೋಗ ಕೇಂದ್ರ ಸಶಸ್ತ್ರ ಪೊಲೀಸ್‌ ಪಡೆಗಳ ಪರೀಕ್ಷೆಯಲ್ಲಿ ತೇರ್ಗಡೆಯಾದ ರಾಜ್ಯದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ

ಈ ವರ್ಷ ಯುಪಿಎಸ್‌ಸಿ ಸಿಎಪಿಎಫ್‌ಗೆ ಅರ್ಹತೆ ಪಡೆದ 151 ಅಭ್ಯರ್ಥಿಗಳ ಪೈಕಿ 82ನೇ ರ‍್ಯಾಂಕ್‌ ಪಡೆಯುವ ಮೂಲಕ ಸಿಮ್ರಾನ್‌ ಬಾಲಾ ಅವರು ಇತಿಹಾಸ ನಿರ್ಮಿಸಿದ್ದಾರೆ.

ಈ ಪರೀಕ್ಷೆಯಲ್ಲಿ ತೇರ್ಗಡೆಯಾದ ಜಮ್ಮು ಮತ್ತು ಕಾಶ್ಮೀರದ ಏಕೈಕ ಹುಡುಗಿ ನಾನು. ನನಗೆ ಹೆಮ್ಮೆ ಎನಿಸುತ್ತಿದೆ. ಜಮ್ಮು ಮತ್ತು ಕಾಶ್ಮೀರದ ಗಡಿ ಪ್ರದೇಶದವಳು. ನನ್ನ ಪ್ರದೇಶದಲ್ಲಿ ಗಡಿಯಾಚೆಗಿನ ಗುಂಡಿನ ದಾಳಿಗಳನ್ನು ನಾನು ನೋಡಿದ್ದೇನೆ. ಇದು ನನ್ನನ್ನು ಸಿಎಪಿಎಫ್‌ಗೆ ಸೇರಲು ಪ್ರೇರೇಪಿಸಿತು. ಇದರಿಂದ ನಾನು ಗಡಿ ಪ್ರದೇಶದಲ್ಲಿಯೂ ಸೇವೆ ಸಲ್ಲಿಸಬಹುದು ಎಂದು ಸಿಮ್ರಾನ್ ಬಾಲಾ ಪ್ರತಿಕ್ರಿಯಿಸಿದ್ದಾರೆ.

ನನ್ನ ಕನಸು ನನಸಾಗಿದೆ. ನಾನು ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳಲ್ಲಿ ಸಹಾಯಕ ಕಮಾಂಡೆಂಟ್ ಆಗಿ ನೇಮಕಗೊಂಡಿದ್ದೇನೆ. ನನ್ನ ಕರ್ತವ್ಯವನ್ನು ಉತ್ಸಾಹದಿಂದ ನಿರ್ವಹಿಸುತ್ತೇನೆ. ನನ್ನ ಯಶಸ್ಸಿನ ಬಗ್ಗೆ ಕುಟುಂಬ ಮತ್ತು ನನ್ನ ನೆರೆಹೊರೆಯವರು ಹೆಮ್ಮೆಪಡುತ್ತಾರೆ ಎಂದು ಖುಷಿ ವ್ಯಕ್ತಪಡಿಸಿದ್ದಾರೆ. 

ನನ್ನ ಪೋಷಕರು, ಶಿಕ್ಷಕರು ಮತ್ತು ಅನೇಕ ಜನರು ನನಗೆ ಬೆಂಬಲ ನೀಡಿದರು. ಕಠಿಣ ಪರಿಶ್ರಮ ನನ್ನ ಯಶಸ್ಸಿಗೆ ಪ್ರಮುಖ ಕಾರಣ. ಕಠಿಣ ಪರಿಶ್ರಮ, ಪ್ರಾಮಾಣಿಕ ಪ್ರಯತ್ನವಿದ್ದರೆ ಯಾರು ಬೇಕಾದರೂ ಯಶಸ್ಸು ಸಾಧಿಸಬಹುದು ಎಂದು ಮಾತನಾಡಿದ್ದಾರೆ.