ವರ್ಷದ ಮೊದಲ ಕ್ವಾರ್ಟರ್​ನಲ್ಲಿ ಶೇ 6ರಷ್ಟು ಮಾತ್ರ ಜಿಡಿಪಿ ವೃದ್ಧಿ: ಆರ್​ಬಿಐಗಿಂತ ಮೂಡೀಸ್ ಅಂದಾಜು ಭಿನ್ನ

ನವದೆಹಲಿ: ಈ ಹಣಕಾಸು ವರ್ಷದ ಮೊದಲ ತ್ರೈಮಾಸಿಕವಾದ ಏಪ್ರಿಲ್​ನಿಂದ ಜೂನ್​ವರೆಗಿನ ಅವಧಿಯಲ್ಲಿ ಶೇ. 6ರಿಂದ ಶೇ. 6.3ರಷ್ಟು ಬೆಳವಣಿಗೆ ಹೊಂದುವ ಸಾಧ್ಯತೆ ಇದೆ ಎಂದು ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ ಮೂಡೀಸ್   ಅಭಿಪ್ರಾಯಪಟ್ಟಿದೆ. ರಿಸರ್ವ್ ಬ್ಯಾಂಕ್ ಇತ್ತೀಚೆಗಷ್ಟೇ ತನ್ನ ವರದಿಯಲ್ಲಿ ಇದೇ ಕ್ವಾರ್ಟರ್​ನಲ್ಲಿ ಜಿಡಿಪಿ ಶೇ. 8ರಷ್ಟು ಬೆಳವಣಿಗೆ ಹೊಂದಬಹುದು ಎಂದು ಅಂದಾಜು ಮಾಡಿತ್ತು. ಇದಕ್ಕೆ ಬಹುತೇಕ ಭಿನ್ನವಾದ ಅಂದಾಜನ್ನು ಮೂಡೀಸ್ ಮಾಡಿದೆ. ಈ ಹಣಕಾಸು ವರ್ಷದಲ್ಲಿ ಸರ್ಕಾರ ನಿರೀಕ್ಷಿಸದಷ್ಟು ಕಡಿಮೆ ಆದಾಯ ಬರುವ ಸಾಧ್ಯತೆ ಇರುವುದರಿಂದ, ಅದರ ಪರಿಣಾಮವಾಗಿ ಬೆಳವಣಿಗೆ ನಿರೀಕ್ಷಿತ ಮಟ್ಟದಲ್ಲಿ ಇರುವುದಿಲ್ಲ ಎಂಬುದು ಮೂಡೀಸ್ ಸಂಸ್ಥೆ ಮುಂದಿಟ್ಟಿರುವ ಕಾರಣಗಳು.

ಹಿಂದಿನ ಕ್ವಾರ್ಟರ್​ನಲ್ಲಿ, ಅಂದರೆ ಜನವರಿಯಿಂದ ಮಾರ್ಚ್​ವರೆಗಿನ ತ್ರೈಮಾಸಿಕ ಅವಧಿಯಲ್ಲಿ ಭಾರತದ ಜಿಡಿಪಿ ಬೆಳವಣಿಗೆ ಶೇ. 6.1ರಷ್ಟು ಇತ್ತು. ಈ ಕ್ವಾರ್ಟರ್​ನಲ್ಲಿ ಬೆಳವಣಿಗೆ ದರ ಹೆಚ್ಚೂಕಡಿಮೆ ಅಷ್ಟೇ ಇರಬಹುದು ಎನ್ನಲಾಗಿದೆ.

ಮೂಡೀಸ್ ಸಂಸ್ಥೆ ಪ್ರಕಾರ 2023-24ರ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕ ಅಭಿವೃದ್ಧಿ ಶೇ. 6.1ರಷ್ಟು ಇರಬಹುದು. 2023-25ರ ಹಣಕಾಸು ವರ್ಷದಲ್ಲಿ ಶೇ. 6.3ರಷ್ಟು ಬೆಳವಣಿಗೆ ಆಗಬಹುದು ಎಂದು ಅಂದಾಜು ಮಾಡಿದೆ

ಆರ್​ಬಿಐ ಮಾಡಿರುವ ಅಂದಾಜು ಪ್ರಕಾರ 2023-24ರ ಹಣಕಾಸು ವರ್ಷದಲ್ಲಿ ಜಿಡಿಪಿ ಶೇ. 6.5ರಷ್ಟು ಬೆಳೆಯಬಹುದು. ಈ ಹಣಕಾಸು ವರ್ಷದಲ್ಲಿ ನಾಲ್ಕು ತ್ರೈಮಾಸಿಕ ಅವಧಿಯಲ್ಲಿ ಜಿಡಿಪಿ ಕ್ರಮವಾಗಿ ಶೇ. 8.0, ಶೇ 6.5, ಶೇ 6.0 ಮತ್ತು ಶೇ. 5.7ರಷ್ಟು ಆಗಬಹುದು ಎಂದು ಆರ್​ಬಿಐ ಭವಿಷ್ಯ ಹೇಳಿದೆ.

ಭಾರತ ಸರ್ಕಾರದ ಸಾಲ ಎಷ್ಟಿದೆ…?

ಭಾರತ ಸರ್ಕಾರಕ್ಕೆ ಅಂದರೆ ನಮ್ಮ ಕೇಂದ್ರ ಸರ್ಕಾರಕ್ಕೆ ವಿಪರೀತ ಸಾಲ ಇದೆ. ಮೂಡೀಸ್ ಸಂಸ್ಥೆಯ ಹಿರಿಯ ಅದಿಕಾರಿ ಜೀನ್ ಫ್ಯಾಂಗ್ ಪ್ರಕಾರ ಭಾರತದ 2022-23ರ ಜಿಡಿಪಿಯ ಶೇ. 81.8ರಷ್ಟು ಸಾಲ ಭಾರತ ಸರ್ಕಾರಕ್ಕಿದ್ದು, ಹೆಚ್ಚು ಸಾಲ ಪಡೆಯುವ ಶಕ್ತಿ ಕಡಿಮೆ ಇದೆಯಂತೆ. ಆದರೆ, ಭಾರತದ ಆರ್ಥಿಕ ಪ್ರಗತಿಯ ಶಕ್ತಿ ಹೆಚ್ಚು ಇದೆ. ಸರ್ಕಾರದ ಸಾಲ ತೀರಿಸುವಷ್ಟು ಸ್ಥಿರವಾದ ಹಣಕಾಸು ನೆಲೆ ಭಾರತದಲ್ಲಿದೆ ಎಂದು ಮೂಡೀಸ್ ಹೇಳಿದೆ.