ಓಡಿ ಹೋಗಿದ್ದ ಪ್ರೇಮಿಗಳನ್ನ ಕರೆತರುತ್ತಿದ್ದ ಪೊಲೀಸ್ ಜೀಪ್​ಗೆ ಅಡ್ಡಗಟ್ಟಿ ಹುಡುಗಿಯನ್ನು ಕರೆದೊಯ್ದ ಪೋಷಕರು

ಕೋಲಾರ: ಪ್ರೀತಿ ಎಂದರೆ ಎರಡು ಜೀವಗಳ ನಡುವಿನ ನಂಬಿಕೆ ಎಂದರೆ ತಪ್ಪಾಗಲಾರದು. ಪ್ರತಿಯೊಬ್ಬರ ಜೀವನದಲ್ಲೂ ಇದು ಮಹತ್ವದ ಘಟ್ಟ. ತಾವು ಪ್ರೀತಿಸಿದವರನ್ನ ಕೊನೆಯವರೆಗೆ ಕಾಪಾಡಿಕೊಂಡು ಮದುವೆಯಾಗಿ ಜೊತೆಯಲ್ಲಿ ಬದುಕಬೇಕೆಂಬ ಅದೆಷ್ಟೋ ಪ್ರೀತಿ ಗಳು ಮರೆಯಾಗಿ ಹೋಗಿವೆ. ಬೆರಳಣಿಕೆಯಷ್ಟು ಪ್ರೀತಿಗಳು ಮದುವೆ(Marriage)ಯಾಗಿ ಸುಂದರ ಜೀವನ ನಡೆಸುತ್ತಿದ್ದಾರೆ. ಅದರಂತೆ ಇಲ್ಲೊಂದು ಪ್ರೇಮಿಗಳಾದ ಜಿಲ್ಲೆಯ ಮುಡುವಾರಪಲ್ಲಿ ಪೋಜಿತ ಹಾಗೂ ಗುಡಿಸವಾರಪಲ್ಲಿ ನರೇಶ್ ಇಬ್ಬರು ಪ್ರೀತಿಸಿ ಮನೆ ಬಿಟ್ಟು ಹೋಗಿದ್ದರು.

ಬಳಿಕ ಹುಡುಗಿಯ ಪೋಷಕರು ಪೊಲೀಸ್​ ಠಾಣೆಗೆ ದೂರು ನೀಡಿದ್ದರು. ಇದರನ್ವಯ ಪ್ರೇಮಿಗಳನ್ನು ಹುಡುಕಿ ಖಾಸಗಿ ಕಾರೊಂದರಲ್ಲಿ ಕರೆ ತರುವ ವೇಳೆ, ಪೋಷಕರು ಅಡ್ಡಗಟ್ಟಿ ಕಾರು ಗ್ಲಾಸ್ ಒಡೆದು ಹುಡುಗಿಯನ್ನು ಕರೆದೊಯ್ದಿದ್ದಾರೆ. ಈ ವೇಳೆ ಪೊಲೀಸರು ಹಾಗೂ ಯುವಕನ ಮೇಲೆ ಕೂಡ ಹಲ್ಲೆ ಮಾಡಿದ್ದರು. ಬಳಿಕ ಮತ್ತೆ ಪೊಲೀಸ್ ಠಾಣೆಗೆ ಕರೆತಂದು ಹುಡುಗಿಯನ್ನು ಬಿಟ್ಟು ಹೋಗಿದ್ದರು. ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ರಾಯಲ್ಪಾಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿತ್ತು. ಪ್ರಕರಣದ ದಾಖಲಿಸಿಕೊಂಡಿರುವ ರಾಯಲ್ಪಾಡು ಪೊಲೀಸರಿಂದ ಐದು ಜನರನ್ನ ವಶಕ್ಕೆ ಪಡೆದಿದ್ದಾರೆ.