ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕಚೇರಿಯಲ್ಲಿ ಚೆನ್ನರಾಜ್‌ ಹಟ್ಟಿಹೊಳಿ ದರ್ಪ; ಕಾಂಗ್ರೆಸ್‌ನ ಸಂಸ್ಕಾರವೇ ಇಷ್ಟು ಎಂದ ಬಿಜೆಪಿ

ಬೆಂಗಳೂರು: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ Lakshmi Hebbalkar ಕಚೇರಿಯಲ್ಲಿ ಅವರ ಸಹೋದರ, ವಿಧಾನ ಪರಿಷತ್ ಸದಸ್ಯ ಚೆನ್ನರಾಜ್‌ ಹಟ್ಟಿಹೊಳಿ ಮಾಧ್ಯಮದವರ ಜತೆ ದರ್ಪ ಪ್ರದರ್ಶಿಸಿದ್ದು ಟೀಕೆಗೆ ಗುರಿಯಾಗಿದೆ. ಇದೀಗ ಆ ವಿಚಾರವನ್ನು ಪ್ರಸ್ತಾಪಿಸಿ ಟ್ವೀಟ್ ಮಾಡಿರುವ ಬಿಜೆಪಿ, ಕಾಂಗ್ರೆಸ್‌ನ ಸಂಸ್ಕಾರವೇ ಇಷ್ಟು ಎಂದು ಟೀಕಿಸಿದೆ. ವಿಧಾನಸೌಧದ ಸಚಿವರ ಕಚೇರಿಯಲ್ಲಿ ಕುಳಿತು ಎಂಎಲ್​​ಸಿ ಚೆನ್ನರಾಜ್ ಹಟ್ಟಿಹೊಳಿ, ಗ್ಯಾರಂಟಿ ಯೋಜನೆಗಳ ಕುರಿತಾದ ಅನುಮಾನಗಳನ್ನು ಬಗೆಹರಿಸಿಕೊಳ್ಳುವುದಕ್ಕಾಗಿ ತೆರಳಿದ್ದ ಮಾಧ್ಯಮದವರ ಜತೆ ಅಹಂಕಾರದಿಂದ ವರ್ತಿಸಿದ್ದರು.

ಚೆನ್ನರಾಜ್ ಹಟ್ಟಿಹೊಳಿ ದರ್ಪ ತೋರಿದ ಬಗ್ಗೆ ಕಿಡಿಕಾರಿರುವ ಬಿಜೆಪಿ, ಕಾಂಗ್ರೆಸ್‌ನ ಸಂಸ್ಕಾರವೇ ಇಷ್ಟು ಎಂಬುದು ಮತ್ತೆ ಸಾಬೀತಾಗಿದೆ. ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ಪ್ರಧಾನಿ ಕಾರ್ಯಾಲಯವನ್ನು ರಾಬರ್ಟ್‌ ವಾದ್ರಾ ಅವರಿಗೆ ಸಮರ್ಪಿಸಿದ್ದರು. ಈಗ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕಚೇರಿಯು ಅವರ ಸಹೋದರ ಚೆನ್ನರಾಜ್‌ ಹಟ್ಟಿಹೊಳಿಗೆ! ವಾಸ್ತವವಾಗಿ, ಮತ ನೀಡಿದ ಜನರನ್ನು ವಂಚಿಸಿ ಭ್ರಷ್ಟಾಚಾರವನ್ನು ವ್ಯವಸ್ಥಿತ ರೀತಿಯಲ್ಲಿ ನಡೆಸುವ ಫಾರ್ಮುಲಾವಿದು ಎಂದು ಟೀಕಿಸಿದೆ.

ಲಕ್ಷ್ಮಿ ಹೆಬ್ಬಾಳ್ಕರ್ ಕಚೇರಿಯಲ್ಲಿ ನಡೆದಿದ್ದೇನು?

ಗ್ಯಾರಂಟಿ ಯೋಜನೆಗಳ ಕುರಿತಾದ ಅನುಮಾನಗಳನ್ನು ಬಗೆಹರಿಸಿಕೊಳ್ಳುವುದಕ್ಕಾಗಿ ಮಾಧ್ಯಮ ಪ್ರತಿನಿಧಿಗಳು ಲಕ್ಷ್ಮೀ ಹೆಬ್ಬಾಳ್ಕರ್ ಕಚೇರಿಗೆ ತೆರಳಿದ್ದರು. ಇದೇ ವೇಳೆ ದರ್ಪದಿಂದ ವರ್ತಿಸಿದ್ದ ಚೆನ್ನರಾಜ್‌ ಹಟ್ಟಿಹೊಳಿ, ಏನೂ ಉತ್ತರ ಕೊಡಲ್ಲ ನಡೀರಿ ಇಲ್ಲಿಂದ ಎಂದು ಆವಾಜ್ ಹಾಕಿದ್ದಾರೆ. ಇಷ್ಟೇ ಅಲ್ಲದೆ, ಜನರ ಪತ್ರಗಳಿಗೂ ತಾವೇ ಸಹಿ ಹಾಕುತ್ತಾ ಕುಳಿತಿದ್ದರು. ಇದೇ ವೇಳೆ ಲಕ್ಷ್ಮೀ ಹೆಬ್ಬಾಳ್ಕರ್ ಸುಮ್ಮನೇ ಕುಳಿತಿದ್ದರು.