ಬೆಂಗಳೂರು: 10 ವರ್ಷಕ್ಕಿಂತ ಹೆಚ್ಚು ಕಾಲದಿಂದ ಅಪ್ಡೇಟ್ ಆಗದೇ ಇರುವ ಆಧಾರ್ ಕಾರ್ಡ್ ಅಪ್ಡೇಟ್ ಮಾಡುವಂತೆ ಸರ್ಕಾರ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಕೋಟ್ಯಂತರ ಜನರು ಆಧಾರ್ ಕಾರ್ಡ್ನಲ್ಲಿರುವ ತಮ್ಮ ಮಾಹಿತಿಯನ್ನು ನವೀಕರಿಸುವ ಕೆಲಸ ಮಾಡುತ್ತಿದ್ದಾರೆ. ಆಧಾರ್ ಕೇಂದ್ರಕ್ಕೆ ಹೋಗಿ 50 ರೂ ಕೊಟ್ಟು ನಮ್ಮ ಡೆಮಾಗ್ರಾಫಿಕ್ ಮಾಹಿತಿ ಅಪ್ಡೇಟ್ ಮಾಡಬಹುದು. ಆದರೆ, ಹೆಚ್ಚಿನ ಜನರು ಶೀಘ್ರದಲ್ಲಿ ಈ ಅಪ್ಡೇಟ್ ಮಾಡಲು ಸಾಧ್ಯವಾಗುವಂತೆ ಆನ್ಲೈನ್ನಲ್ಲೂ ಅವಕಾಶ ಮಾಡಿಕೊಡಲಾಗಿದೆ. ಜೂನ್ 14ರವರೆಗೂ ನೀವು ಆನ್ಲೈನ್ನಲ್ಲಿ ಉಚಿತವಾಗಿ ಆಧಾರ್ ಅಪ್ಡೇಟ್ ಮಾಡಬಹುದು. ಯಾವುದೇ ಶುಲ್ಕ ಪಾವತಿಸಬೇಕಿಲ್ಲ. ಇದು ಯುಐಡಿಎಐನ ಅಧಿಕೃತ ವೆಬ್ಸೈಟ್ನಲ್ಲಿ ಇರುವ ಆಫರ್. ಇನ್ನೈದು ದಿನದಲ್ಲಿ ಈ ಆಫರ್ ಮುಗಿಯುತ್ತದೆ. ಜೂನ್ 14ರವರೆಗೂ ಉಚಿತವಾಗಿ ನಮ್ಮ ಆಧಾರ್ನ ಡೆಮೋಗ್ರಾಫಿಕ್ ವಿವರಗಳನ್ನು ಅಪ್ಡೇಟ್ ಮಾಡಬಹುದು. ಡೆಮಾಗ್ರಾಫಿಕ್ ವಿವರ ಎಂದರೆ ನಮ್ಮ ವಿಳಾಸ, ಹೆಸರು, ಜನ್ಮದಿನಾಂಕ ಇತ್ಯಾದಿ. ಆದರೆ, ಈ ಉಚಿತ ಸೇವೆ ಕೇವಲ ಮೈ ಆಧಾರ್ ಪೋರ್ಟಲ್ನಲ್ಲಿ ಮಾತ್ರವೇ.
೧೦ ವರ್ಷ ಬಳಿಕ ಅಧಾರ್ ಕಾರ್ಡ್ ಅಪ್ಡೇಟ್ ಆಗಬೇಕು ಎಂದಿದೆ ಸರ್ಕಾರ
ನಮ್ಮಲ್ಲಿ ಹೆಚ್ಚಿನ ಜನರು ಆಧಾರ್ ಕಾರ್ಡ್ ಮಾಡಿಸಿದಾಗಿನಿಂದ ಒಮ್ಮೆಯೂ ಅಪ್ಡೇಟ್ ಮಾಡಿಲ್ಲ. 10 ವರ್ಷಗಳಿಂದ ಅಪ್ಡೇಟ್ ಆಗದ ಆಧಾರ್ ಕಾರ್ಡ್ ಅನ್ನು ಅಪ್ಡೇಟ್ ಮಾಡಬೇಕೆಂದು ಸರ್ಕಾರ ಜನಸಾಮಾನ್ಯರಿಗೆ ಸೂಚಿಸಿದೆ. ಐಡಿ ಪ್ರೂಫ್, ಅಡ್ರೆಸ್ ಪ್ರೂಫ್ ದಾಖಲೆಗಳನ್ನು ಆಧಾರ್ಗೆ ಮತ್ತೊಮ್ಮೆ ಸಲ್ಲಿಸಬೇಕಾಗುತ್ತದೆ. ಇದರಿಂದ ಆಧಾರ್ ಡಾಟಾಬೇಸ್ನಲ್ಲಿ ಸಮರ್ಪಕ ಮಾಹಿತಿ ಸಂಗ್ರಹವಾಗಿರುತ್ತದೆ.
ಜೂನ್ 14ರೊಳಗೆ ಆಧಾರ್ ಅಪ್ಡೇಟ್ ಮಾಡದಿದ್ದರೆ…?
ಜೂನ್ 14ರೊಳಗೆ ಆಧಾರ್ ಕಾರ್ಡ್ ಅಪ್ಡೇಟ್ ಮಾಡದೇ ಹೋದರೆ ಉಚಿತ ಎಂಬುದು ರದ್ದಾಗುವುದು ಬಿಟ್ಟರೆ ಬೇರೇನೂ ವ್ಯತ್ಯಾಸವಾಗದು. ಮಾಮೂಲಿಯ ರೀತಿಯಲ್ಲಿ ನೀವು ಆಧಾರ್ ಸೆಂಟರ್ಗೆ ಹೋಗಿ ಆಧಾರ್ ವಿವರ ಅಪ್ಡೇಟ್ ಮಾಡಿಸಬೇಕೆಂದರೆ 50 ರೂ ಶುಲ್ಕ ಪಾವತಿಸಲೇಬೇಕು. ಜೂನ್ 14ರ ನಂತರ ಮೈ ಆಧಾರ್ ಪೋರ್ಟಲ್ನಲ್ಲೂ ನೀವು 50 ರೂ ಶುಲ್ಕ ಪಾವತಿಸಿಯೇ ಆಧಾರ್ ಅಪ್ಡೇಶನ್ ಮಾಡಬೇಕಾಗುತ್ತದೆ.
ಆನ್ಲೈನ್ನಲ್ಲಿ ಉಚಿತವಾಗಿ ಆಧಾರ್ ಅಪ್ಡೇಟ್ ಮಾಡುವುದು ಹೇಗೆ?
- ಮೈ ಆಧಾರ್ನ ಅಧಿಕೃತ ಪೋರ್ಟಲ್ myaadhaar.uidai.gov.inಗೆ ಹೋಗಿ ಆಧಾರ್ ನಂಬರ್ ಬಳಸಿ ಲಾಗಿನ್ ಅಗಬೇಕು.
- ಪ್ರೊಸೀಡ್ ಟು ಅಪ್ಡೇಟ್ ಅಡ್ರೆಸ್ ಎಂಬ ಅಯ್ಕೆ ಆರಿಸಿಕೊಳ್ಳಿ
- ಈಗ ನಿಮ್ಮ ಅಧಾರ್ ನೊಂದಾಯಿತ ಮೊಬೈಲ್ಗೆ ಓಟಿಪಿ ಬರುತ್ತದೆ.
- ಒಟಿಪಿ ಹಾಕಿದ ಬಳಿಕ ಡಾಕ್ಯುಮೆಂಟ್ ಅಪ್ಡೆಟ್ ಮೇಲೆ ಕ್ಲಿಕ್ ಮಾಡಿ.
- ಈಗ ವ್ಯಕ್ತಿಯ ವಿವರ ಕಾಣಿಸುತ್ತದೆ. ಅದು ಸರಿಯಾಗಿದ್ದರೆ ಮುಂದಿನ ಲಿಂಕ್ ಮೇಲೆ ಕ್ಲಿಕ್ ಮಾಡಿ
- ಬಳಿಕ ಐಡಿ ಮತ್ತು ಅಡ್ರೆಸ್ ಪ್ರೂಫ್ ದಾಖಲೆಗಳನ್ನು ಆಯ್ದುಕೊಳ್ಳಿ.
- ನೀವು ಸ್ಕ್ಯಾನ್ ಮಾಡಿದ ಈ ದಾಖಲೆಗಳ ಪ್ರತಿತಿಯನ್ನು ಅಪ್ಲೋಡ್ ಮಾಡಿ
- ಈಗ ನಿಮ್ಮ ಮನವಿ ಸ್ವೀಕೃತವಾಗುತ್ತದೆ. 14 ಅಂಕಿಗಳ ಯುಆರ್ಎನ್ ನಂಬರ್ ಜನರೇಟ್ ಆಗುತ್ತದೆ.
ಕೆಲ ದಿನಗಳ ಬಳಿಕ ಆಧಾರ್ ಕಾರ್ಡ್ನಲ್ಲಿ ನಿಮ್ಮ ಹೊಸ ಮಾಹಿತಿ ಅಪ್ಡೇಟ್ ಆಗಿರುತ್ತದೆ. ಅದನ್ನು ನೀವು ಯುಆರ್ಎನ್ ನಂಬರ್ ಬಳಸಿ ಟ್ರ್ಯಾಕ್ ಮಾಡಬಹುದು. ಅಪ್ಡೇಟ್ ಆದ ಆಧಾರ್ ಕಾರ್ಡ್ನ ಪ್ರಿಂಟೌಟ್ ಪಡೆದು ನಿಮ್ಮ ಬಳಿ ಇಟ್ಟುಕೊಳ್ಳಿ.