ಸರ್ಕಾರಿ ನೌಕರಿಯನ್ನು ಗಿಟ್ಟಿಸಲು ವ್ಯಕ್ತಿಯೊಬ್ಬ ಸುಳ್ಳು ಹೇಳಿ ಸಿಕ್ಕಿಹಾಕಿಕೊಂಡ ಪ್ರಸಂಗ ದೆಹಲಿಯಲ್ಲಿ ನಡೆದಿದೆ. ಇತ್ತೀಚೆಗೆ ಸಂಭವಿಸಿದ ಓಡಿಶಾ ರೈಲು ಅಪಘಾತದಲ್ಲಿ ತನ್ನ ತಾಯಿ ತೀರಿ ಹೋಗಿದ್ದಾರೆಂದು ಇವನು ಅಧಿಕಾರಿಗಳಿಗೆ ಸುಳ್ಳು ಹೇಳಿದ್ದಾನೆ. ಬಾಲ್ಸೋರ್ ರೈಲು ಅಪಘಾತದ ನಂತರ ಸರ್ಕಾರಿ ಉದ್ಯೋಗ ಪಡೆಯುವ ಉದ್ದೇಶದಿಂದ ತಾನು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಭೇಟಿ ಮಾಡಲು ದೆಹಲಿಗೆ ಪ್ರಯಾಣಿಸಿದ್ಧಾಗಿ ತಿಳಿಸಿದ್ದಾನೆ. ಈ ಸಂದರ್ಭದಲ್ಲಿ ಅಧಿಕಾರಿಗಳು ವಿಚಾರಣೆ ನಡೆಸಿದಾಗ, ಅವನ ತಾಯಿ 2018ರಲ್ಲಿಯೇ ನಿಧನ ಹೊಂದಿದ್ದರ ಬಗ್ಗೆ ಬೆಳಕಿಗೆ ಬಂದಿದ ಪರಿಣಾಮವಾಗಿ ಪೊಲೀಸರು ಅವನನ್ನು ಬಂಧಿಸಿದ್ದಾರೆ.
ಈ ವ್ಯಕ್ತಿಯನ್ನು ಪಾಟ್ನಾದ ಸಂಜಯ್ ಕುಮಾರ್ ಎಂದು ಗುರುತಿಲಾಗಿದೆ. ಇವನು ಗುರುವಾರದಂದು ಸಚಿವರ ನಿವಾಸಕ್ಕೆ ತೆರಳಿ ಅವರನ್ನು ಭೇಟಿ ಮಾಡಲು ಪ್ರಯತ್ನಿಸಿದ್ದಾನೆ. ಆಗ ರೈಲು ಭವನದಲ್ಲಿ ಅವರನ್ನು ಕಾಣಲು ತಿಳಿಸಲಾಗಿದೆ. ಆ ಪ್ರಕಾರ ಅವನು ಸಚಿವರ ಕಚೇರಿಗೆ ತೆರಳಿದ್ಧಾನೆ. ಅಲ್ಲಿ ಅಧಿಕಾರಿಗಳೊಂದಿಗೆ ಮಾತನಾಡುವಾಗ ಅವನ ಹೇಳಿಕೆಯಲ್ಲಿ ವ್ಯತ್ಯಾಸ ಕಂಡುಬಂದಿದೆ.
ತನ್ನ ತಾಯಿ ಕೋರಮಂಡಲ್ ಎಕ್ಸ್ಪ್ರೆಸ್ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದು ಸಾವನ್ನಪ್ಪಿದ್ದಾರೆ ಎಂದು ಹೇಳಿಕೊಂಡಿದ್ದಾನೆ. ಹಾಗಿದ್ದರೆ ನಿಮ್ಮ ತಾಯಿಯ ಪ್ರಯಾಣಕ್ಕೆ ಸಂಬಂಧಿಸಿದ ಮಾಹಿತಿ, ಸಾಕ್ಷ್ಯಗಳನ್ನು ಒದಗಿಸಿ ಎಂದು ಅಧಿಕಾರಿಗಳು ಕೇಳಿದಾಗ ಅವನು ನಿರುತ್ತರನಾಗಿದ್ದಾನೆ. ಸ್ವಲ್ಪ ಹೊತ್ತಿನ ಬಳಿಕ ತಾನು ಟ್ರಾವೆಲ್ ಏಜೆಂಟ್ ಮೂಲಕ ಟಿಕೆಟ್ ಬುಕ್ ಮಾಡಿದ್ದೆ, ಅವನ ಹೆಸರು ನೆನಪಿಲ್ಲ. ಅಲ್ಲದೆ ಸೀಟ್ ವೇಟಿಂಗ್ ಲಿಸ್ಟ್ನಲ್ಲಿತ್ತು ಎಂದು ಹೇಳಲು ಪ್ರಯತ್ನಿಸಿದ್ದಾನಾದರೂ ಸಾಕ್ಷ್ಯಾಧಾರಗಳೊಂದಿಗೆ ಸಾಬೀತುಪಡಿಸುವಲ್ಲಿ ವಿಫಲನಾಗಿದ್ದಾನೆ. ಅಧಿಕಾರಿಗಳಿಗೆ ಅನುಮಾನ ದಟ್ಟವಾಗಿದ್ದರಿಂದ ಅವನನ್ನು ಕೂಡಲೇ ಬಂಧಿಸಿದ್ದಾರೆ.