ಮಂಡ್ಯ: ಮೈಸೂರು ನಗರಕ್ಕೆ ಕೈಗಾರಿಕೆಗಳು ಬರಲಿ, ಸಾಂಸ್ಕೃತಿಕ ನಗರಿ ಬೆಳೆಯಲಿ. ಪ್ರತಿದಿನ ಬೆಂಗಳೂರು-ಮೈಸೂರು ಸಂಚರಿಸುವ ಜನರಿಗೆ ಅನುಕೂಲವಾಗಲಿ ಎಂಬ ದೃಷ್ಟಿಯಿಂದ ಕೇಂದ್ರ ಸರ್ಕಾರ 9000 ಕೋಟಿ ವೆಚ್ಚದಲ್ಲಿ ಮೈ-ಬೆಂ ದಶಪಥ ಹೆದ್ದಾರಿ ನಿರ್ಮಾಣ ಮಾಡಲಾಗಿದೆ. ಆದರೆ ಈ ಹೆದ್ದಾರಿ ಇದೀಗ ಡೆಡ್ಲಿ ಆಕ್ಸಿಡೆಂಟ್ ಪ್ಲೇಸ್ ಆಗ್ತಿದೆ. ಮಂಡ್ಯ ಜಿಲ್ಲೆ ವ್ಯಾಪ್ತಿಯಲ್ಲಿ ಕೇವಲ 5 ತಿಂಗಳಲ್ಲೆ 55 ಮಂದಿ ಅಪಘಾತದಲ್ಲಿ ಮೃತಪಟ್ಟಿರೋದು ಆತಂಕ ಮೂಡಿಸಿದೆ.
ಹೌದು. ಮೈ-ಬೆಂ ಟೆನ್ ಲೈನ್ ಹೈವೇ ಮಂಡ್ಯ (Mandya) ಜಿಲ್ಲೆ ವ್ಯಾಪ್ತಿಯಲ್ಲಿಯೇ ಹೆಚ್ಚು ಹಾದು ಹೋಗಿದೆ. ಬರೋಬ್ಬರಿ 55 ಕಿ.ಮೀಗೂ ಹೆಚ್ಚು ದಶಪಥ ಹೆದ್ದಾರಿ ಇದೆ. ಸದ್ಯ ದಶಪಥ ಹೆದ್ದಾರಿ ಕಾಮಗಾರಿ ಸಂಪೂರ್ಣ ಮುಗಿದಿದ್ದು, ವಾಹನ ಸವಾರರು ಖುಷಿಯಿಂದ ಪ್ರಯಾಣ ಬೆಳೆಸುತ್ತಿದ್ದಾರೆ. ಆದರೆ ಮಂಡ್ಯ ಜಿಲ್ಲಾ ವ್ಯಾಪ್ತಿಯ ದಶಪಥ ಹೆದ್ದಾರಿಯಲ್ಲಿ ನಡೆದಿರುವ ಅಪಘಾತ ಪ್ರಕರಣ ಹಾಗೂ ಅದರಿಂದ ಮೃತಪಟ್ಟವರ ಸಂಖ್ಯೆ ನೋಡಿದರೆ ಜನರಲ್ಲಿ ಆತಂಕ ಮೂಡಿಸುತ್ತಿದೆ. ಜನವರಿ ತಿಂಗಳಿಂದ ಮೇ ತಿಂಗಳ ಅಂತ್ಯದ ವರೆಗೆ 570 ಅಪಘಾತ ಪ್ರಕರಣ ಸಂಭವಿಸಿದ್ದು, 55 ಮಂದಿ ಮೃತಪಟ್ಟರೇ, 52 ಮಂದಿಗೆ ತೀವ್ರ ಪೆಟ್ಟು ಬಿದ್ದಿದೆ. ಇನ್ನು 184 ಮಂದಿಗೆ ಕೈಕಾಲು ಮುರಿದಿದ್ದು, 279 ಜನರಿಗೆ ಅಪಘಾತದಲ್ಲಿ ಸಣ್ಣ ಪುಟ್ಟ ಗಾಯಗಳಾಗಿದ್ದು ಜನರಲ್ಲಿ ಆಘಾತ ಮೂಡಿಸಿದೆ.
ಅಪಘಾತಕ್ಕೆ ಕಾರಣಗಳನ್ನ ನೋಡೋದಾದ್ರೆ ಮೊದಲಿಗೆ ಕೇಳಿಬರುವಂತ ವಿಚಾರ ಅಂದ್ರೆ ಅತಿ ವೇಗ. ಎಕ್ಸ್ ಪ್ರೆಸ್ ವೇ ಸೇರಿದಂತೆ ಸರ್ವಿಸ್ ರಸ್ತೆಯಲ್ಲಿಯು ವೇಗವಾಗಿ ವಾಹನಗಳು ಬರುತ್ತಿದ್ದು, ನಿಯಂತ್ರಿಸಲಾಗದೇ ಅಪಘಾತ ನಡೆಯುತ್ತಿದೆ. ಇನ್ನೊಂದೆಡೆ ಅವೈಜ್ಞಾನಿಕವಾಗಿ ಕಾಮಗಾರಿಯು ಕಾರಣ ಎನ್ನುವ ಮಾತುಗಳು ಕೇಳಿಬರುತ್ತಿದೆ. ಮತ್ತೊಂದೆಡೆ ಸರ್ವಿಸ್ ರಸ್ತೆಗಳಲ್ಲಿ ದಿಬ್ಬ ನಿರ್ಮಾಣ ಆಗ್ತಿದ್ದು, ಅಲ್ಲಿಯು ಅಪಘಾತಗಳು ಹೆಚ್ಚಾಗಿ ಸಂಭವಿಸುತ್ತಿದೆ. ಇನ್ನು ಹಲವು ಕಾರಣಗಳಿಂದ ಅಪಘಾತ ದಿನೇ ದಿನೇ ಹೆಚ್ಚಾಗ್ತಿದ್ದು, ಸ್ವಲ್ಪ ಯಾಮಾರಿದ್ರು ಅಪಘಾತ ಕಟ್ಟಿಟ್ಟ ಬುತ್ತಿ ಎನಿಸುತ್ತಿದೆ.