ಚೆನ್ನೈ: ಶತಮಾನಗಳು ಎಷ್ಟೇ ಕಳೆದರೂ ನಮ್ಮ ಸಮಾಜದಲ್ಲಿರುವ ಜಾತಿಬೇಧ ಇನ್ನು ಕಡಿಮೆ ಆಗಿಲ್ಲ, ಕೆಳವರ್ಗದ ಸಮುದಾಯ ಇಂದಿಗೂ ಹಲವು ಕಡೆ ಜಾತಿಯೆಂಬ ಭೂತದಿಂದ ಸಂಕಟ ಪಡುತ್ತಿದೆ. ಜಾತಿಯ ಕಾರಣಕ್ಕೆ ಮೇಲ್ವರ್ಗದ ಜನ ದಲಿತರನ್ನು ದೇಗುಲ ಪ್ರವೇಶಿಸಲು ಬಿಡದೇ ಅನಾಗರಿಕವಾಗಿ ವರ್ತಿಸಿದ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ತಮಿಳುನಾಡಿನ ವಿಲ್ಲುಪುರಂ ಜಿಲ್ಲೆಯ ಮೆಲ್ಪತಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಇದಕ್ಕೆ ಈಗ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಅಲ್ಲದೇ ಈ ದೇಗುಲಕ್ಕೆ ಜಿಲ್ಲಾಧಿಕಾರಿಗಳು ಬೀಗ ಜಡಿದಿದ್ದಾರೆ.
ದಲಿತರನ್ನು ದೇಗುಲದ ಒಳಗೆ ಪ್ರವೇಶಿಸಲು ಮೇಲ್ವರ್ಗದವರು ನಿರಾಕರಿಸಿದರೆಂಬ ಕಾರಣಕ್ಕೆ ಜಿಲ್ಲಾಧಿಕಾರಿಗಳು ತಮಿಳುನಾಡಿನ ವಿಲ್ಲುಪುರಂ ಜಿಲ್ಲೆಯ ಮೆಲ್ಪತಿ ಗ್ರಾಮದ ದೇವಸ್ಥಾನವನ್ನೇ ಬಂದ್ ಮಾಡಿಸಿದ್ದಾರೆ. ಇಲ್ಲಿನ ಧರ್ಮರಾಜ ದ್ರೌಪದಿ ದೇವಸ್ಥಾನದಲ್ಲಿ ದಲಿತರು ದೇಗುಲದ ಒಳಗೆ ಪ್ರವೇಶ ಮಾಡಲು ಯತ್ನಿಸಿದ್ದರು. ಆದರೆ ಅವರು ಕೆಳಜಾತಿಯವರು ಎಂಬ ಕಾರಣಕ್ಕೆ ಮೇಲ್ವರ್ಗದವರು ಪ್ರವೇಶ ನಿರ್ಬಂಧಿಸಿದ್ದರು. ಈ ಮಾಹಿತಿ ತಿಳಿದ ಬಳಿಕ ಜಿಲ್ಲಾಧಿಕಾರಿ ರವಿಚಂದ್ರನ್ ಅವರು ದೇಗುಲವನ್ನು ಬಂದ್ ಮಾಡಿಸಿದ್ದಾರೆ. ದೇಗುಲದ ಗೋಡೆ ಮೇಲೆ,‘ಸಮಸ್ಯೆ ಇತ್ಯರ್ಥವಾಗುವವರೆಗೂ ದೇಗುಲದ ಬಾಗಿಲುಗಳನ್ನು ತೆರೆಯಲಾಗುವುದಿಲ್ಲ’ ಎಂದು ನೋಟಿಸ್ ಅಂಟಿಸಿದ್ದಾರೆ.