ಬೆಂಗಳೂರು: ಚುನಾವಣೆ ಪೂರ್ವ ಘೋಷಣೆ ಮಾಡಿದ್ದ 5 ಗ್ಯಾರೆಂಟಿಗಳನ್ನು ಕಾಂಗ್ರೆಸ್ ಅಧಿಕಾರಿಕ್ಕೆ ಬಂದ ಮೇಲೆ ಜಾರಿ ಮಾಡಿದೆ. ಆದರೆ ಇದಕ್ಕೆ ಷರತ್ತುಗಳನ್ನು ವಿಧಿಸಿದ್ದು ಜನರ ಆಕ್ರೋಷಕ್ಕೆ ಕಾರಣವಾಗಿದೆ. ಇನ್ನು 5 ಗ್ಯಾರೆಂಟಿಗಳಲ್ಲಿ ಒಂದಾದ ಗೃಹಜ್ಯೋತಿ ಯೋಜನೆ ಜಾರಿ ವಿಚಾರವಾಗಿ ಜನರಲ್ಲಿ ಸಾಕಷ್ಟು ಗೊಂದಲ ಮೂಡಿದೆ. ಮುಖ್ಯವಾಗಿ ಬಾಡಿಗೆ ಮನೆಯವರಿಗೂ ಕೂಡ ಈ ಯೋಜನೆಯ ಲಾಭ ಸಿಗುತ್ತದೆಯೇ? ಎಂಬ ಪ್ರಶ್ನೆ ಬಾಡಿಗೆದಾರರಲ್ಲಿ ಮೂಡಿದೆ. ಈ ವಿಚಾರವಾಗಿ ಇಂಧನ ಸಚಿವ ಕೆ.ಜೆ ಜಾರ್ಜ್ ಮಾತನಾಡಿ ಬಾಡಿಗೆದಾರರಿಗೂ ಖಂಡಿತ ಗೃಹಜ್ಯೋತಿ ಭಾಗ್ಯ ಸಿಗಲಿದೆ ಎಂದು ಹೇಳಿದ್ದಾರೆ.
ಬೆಂಗಳೂರಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವ ಕೆ.ಜೆ.ಜಾರ್ಜ್ ಬಾಡಿಗೆದಾರರು ಅರ್ಜಿ ಸಲ್ಲಿಸುವಾಗ ಸಂಬಂಧಿಸಿದ ದಾಖಲೆ ಇರಬೇಕು. ಎಷ್ಟು ವರ್ಷಗಳಿಂದ ಬಾಡಿಗೆ ಮನೆಯಲ್ಲಿದ್ದಾರೆಂದು ದಾಖಲೆ ಇರಬೇಕು. ವಿದ್ಯುತ್ ಬಿಲ್, ಮನೆ ಬಾಡಿಗೆ ಕರಾರುಪತ್ರ ಇರಬೇಕು. ಮನೆ ಮಾಲೀಕ ಕಡ್ಡಾಯವಾಗಿ ಆಸ್ತಿ ತೆರಿಗೆ ಪಾವತಿಸಿರಬೇಕು. ಎಷ್ಟು ಬಾಡಿಗೆ ಮನೆಗಳಿವೆ ಎಂದು ಮಾಲೀಕ ಘೋಷಿಸಿರುವ ದಾಖಲೆಗಳಿರಬೇಕು ಎಂದು ತಿಳಿಸಿದ್ದಾರೆ. ಬಾಡಿಗೆದಾರರಿಗೆ ಉಚಿತ ವಿದ್ಯುತ್ ವಿಚಾರದಲ್ಲಿ ಯಾವುದೇ ಗೊಂದಲವಿಲ್ಲ. ಬಾಡಿಗೆದಾರರು ಕಳ್ಳಾಟ ಮಾಡಿರುವುದು ಕಂಡುಬಂದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಉಚಿತ ವಿದ್ಯುತ್ಗಾಗಿ ಸೇವಾಸಿಂಧು ಮೂಲಕ ಅರ್ಜಿ ಸಲ್ಲಿಸಿ
ಪ್ರತಿಯೊಂದು ಮನೆಯವರೂ 200 ಯುನಿಟ್ ವರೆಗೆ ವಿದ್ಯುತ್ ಅನ್ನು ಉಚಿತವಾಗಿ ಬಳಕೆ ಮಾಡಬಹುದು ಎಂದು ಯೋಚನೆಯಲ್ಲಿದ್ದ ಜನರು ಇದೀಗ ಉಚಿತ ವಿದ್ಯುತ್ ಯೋಜನೆಯ ಲಾಭ ಪಡೆಯಲು ಅರ್ಜಿ ಸಲ್ಲಿಸಬೇಕಾಗಿದೆ. ಚುನಾವಣೆಗೂ ಮುನ್ನ ನನಗೂ ಫ್ರೀ, ನಿನಗೂ ಫ್ರೀ, ಎಲ್ಲರಿಗೂ ಫ್ರೀ.. ಫ್ರೀ.. ಫ್ರೀ.. ಎನ್ನುತ್ತಿದ್ದ ಕಾಂಗ್ರೆಸ್ ಇದೀಗ ಸರ್ಕಾರ ರಚನೆಯಾದ ನಂತರ ಉಚಿತ ವಿದ್ಯುತ್ ಯೋಜನೆ ಗೃಹಜ್ಯೋತಿ ಒಳಗೊಂಡ ಐದು ಗ್ಯಾರಂಟಿಗಳಿಗೆ ಒಂದೊಂದಾಗಿಯೇ ಷರತ್ತುಗಳನ್ನು ವಿಧಿಸುತ್ತಿದೆ.
ಸದ್ಯ ಆನ್ಲೈನ್ ಅಥವಾ ಕಚೇರಿಗೆ ತೆರಳಿ ಕರೆಂಟ್ ಬಿಲ್ ಕಟ್ಟುವ ಸಮಯ ಉಳಿಯಿತಲ್ಲಾ ಎಂದು ಸಂತೋಷದಲ್ಲಿದ್ದ ಗ್ರಾಹಕರು, ಇದೀಗ ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಬೇಕಾಗಿದೆ. ಅರ್ಜಿ ಸಲ್ಲಿಸಿದವರಿಗಷ್ಟೇ 200 ಯುನಿಟ್ ವರೆಗೆ ವಿದ್ಯುತ್ ಉಚಿತವಾಗಿ ಸಿಗಲಿದೆ.
ಜುಲೈ 1 ರಿಂದ ಗೃಹ ಜ್ಯೋತಿ ಜಾರಿಯಾಗಲಿದೆ. ಆರಂಭದಲ್ಲಿ ಎಲ್ಲರಿಗೂ 200 ಯುನಿಟ್ ಉಚಿತ ವಿದ್ಯುತ್ ಎಂದು ಹೇಳಿದ್ದರೂ ಸರ್ಕಾರ ರಚನೆಯಾದ ನಂತರ ಗ್ರಾಹಕರು ಹಿಂದೆ ಬಳಕೆ ಮಾಡುತ್ತಿದ್ದ ವಿದ್ಯುತ್ ಪ್ರಮಾಣದ ಆಧಾರದ ಮೇಲೆ ವಿದ್ಯುತ್ ಉಚಿತ ಇರಲಿದೆ ಎಂದು ಷರತ್ತು ವಿಧಿಸಿತು.
ಅಲ್ಲದೆ, 12 ತಿಂಗಳ ಸರಾಸರಿ ವಿದ್ಯುತ್ ಬಳಕೆಗೆ ಶೇ 10 ರಷ್ಟು ಹೆಚ್ಚುವರಿ ಯೂನಿಟ್ ಸೇರಿಸಿ ಯೋಜನೆಯ ಪ್ರಯೋಜನ ಒದಗಿಸಲಾಗವುದು ಎಂದು ಹೇಳಿದೆ. ಈ ರೀತಿ 200 ಯೂನಿಟ್‌ಗಳವರೆಗಿನ ಬಳಕೆಗೆ ಶುಲ್ಕದ ವಿನಾಯಿತಿ ನೀಡಲಾಗುತ್ತದೆ. ಜುಲೈವರೆಗೆ ಯಾವುದೇ ಗ್ರಾಹಕರು ಬಿಲ್ ಬಾಕಿ ಉಳಿಸಿಕೊಂಡಿದ್ದರೆ ಅದನ್ನು ಪಾವತಿಸಬೇಕಿದೆ.