300ಕ್ಕೂ ಹೆಚ್ಚು ಮೃತದೇಹಗಳನ್ನ ಪರಿಶೀಲನೆ ಮಾಡಿದ್ದೇನೆ, ಯಾರೂ ಕನ್ನಡಿಗರು ಇಲ್ಲ: ಸಂತೋಷ್ ಲಾಡ್

ಬೆಂಗಳೂರು: ಒಡಿಶಾ ರೈಲು ದುರಂತದಲ್ಲಿ ಮೃತಪಟ್ಟವರ 300ಕ್ಕೂ ಹೆಚ್ಚು ಮೃತದೇಹಗಳನ್ನ ಪರಿಶೀಲಿಸಿದ್ದೇನೆ. ಯಾರೂ ಕನ್ನಡಿಗರು ಇಲ್ಲ ಎಂದು ಸಚಿವ ಸಂತೋಷ್ ಲಾಡ್ ತಿಳಿಸಿದ್ದಾರೆ.

ರೈಲು ಅಪಘಾತವಾದ ಸ್ಥಳಕ್ಕೆ ಭೇಟಿ ನೀಡಿದ ಬಳಿಕ ಎರಡ್ಮೂರು ಶವಗಾರ, ನಾಲ್ಕು ಆಸ್ಪತ್ರೆಗಳಲ್ಲಿ ಹುಡುಕಾಟ ಮಾಡಿದ್ದು, ನಾಲ್ಕು ಆಸ್ಪತ್ರೆಗಳಲ್ಲಿ 750 ಗಾಯಾಳು ರೋಗಿಗಳನ್ನು ಮಾತನಾಡಿಸಿದ್ದಾರೆ. 

750 ಗಾಯಾಳುಗಳಲ್ಲಿ ಯಾರೂ ಕನ್ನಡಿಗರು ಇಲ್ಲ. 300ಕ್ಕೂ ಹೆಚ್ಚು ಡೆಡ್‌ಬಾಡಿಗಳನ್ನು ಪರಿಶೀಲನೆ ಮಾಡಿದ್ದೇನೆ, ಯಾರೂ ಕನ್ನಡಿಗರಿಲ್ಲ. ಕನ್ನಡಿಗರು ಸೇಫ್ ಆಗಿದ್ದಾರೆ. 110 ಜನ ಕಳಸದವರು ವಾಪಾಸ್ ಆಗುತ್ತಿದ್ದಾರೆ. ಪುರಿ ಜಗನ್ನಾಥ ದರ್ಶನಕ್ಕೆ ಬಂದವರಿಗೆ ಟಿಕೆಟ್ ವ್ಯವಸ್ಥೆ ಮಾಡಿದ್ದೇವೆ ಎಂದಿದ್ದಾರೆ.

ಒಡಿಶಾದ ಪುರಿ ಜಗನ್ನಾಥ ದರ್ಶನಕ್ಕೆ ತೆರಳಿದ್ದ 12 ಯಾತ್ರಿಗಳು ವಾಪಸ್ಸಾಗಲು ವ್ಯವಸ್ಥೆ ಇಲ್ಲದೇ ಪರದಾಡುತ್ತಿದ್ದು, ಸಂತೋಷ್ ಲಾಡ್ ಯಾತ್ರಿಗಳನ್ನು ವಾಪಸ್ ಕರೆತರುವ ಸಲುವಾಗಿ ಬೆಂಗಳೂರಿಗೆ ವಿಮಾನ ಟಿಕೆಟ್ ವ್ಯವಸ್ಥೆ ಮಾಡಿದ್ದಾರೆ. ಭುವನೇಶ್ವರದಿಂದ ವಿಮಾನ ಟಿಕೆಟ್ ವ್ಯವಸ್ಥೆ ಮಾಡಿದ್ದು, ಯಾತ್ರಿಗಳು ಇಂದು (ಭಾನುವಾರ) ಸಂಜೆ ವಾಪಸ್ ಆಗಲಿದ್ದಾರೆ.