ಗುರುತಿನ ಚೀಟಿ ಇಲ್ಲದೆ ನೋಟು ಬದಲಾವಣೆಗೆ ಅವಕಾಶ ಬೇಡ

ನವದೆಹಲಿ: ಮಾಹಿತಿ ಮತ್ತು ಗುರುತಿನ ಚೀಟಿ ಇಲ್ಲದೇ 2000 ರು. ಮುಖಬೆಲೆಯ ನೋಟುಗಳ ಜಮೆ ಅಥವಾ ಬದಲಾವಣೆಗೆ ಅವಕಾಶ ನೀಡಬಾರದು ಎಂದು ಕೋರಿ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ. ಮಾಹಿತಿ ಮತ್ತು ಗುರುತಿನ ಚೀಟಿ ಬೇಡ ಎಂಬ ಎಸ್‌ಬಿಐ ಮತ್ತು ಆರ್‌ಬಿಐನ ಹೇಳಿಕೆ ಏಕಪಕ್ಷೀಯ, ಅತಾರ್ಕಿಕ ಮತ್ತು ಸಂವಿಧಾನದ 14ನೇ ವಿಧಿಯ ಉಲ್ಲಂಘನೆ ಎಂದು ಹಿರಿಯ ವಕೀಲ ಅಶ್ವಿನಿ ಉಪಾಧ್ಯಾಯ ತಮ್ಮ ಅರ್ಜಿಯಲ್ಲಿ ವಾದಿಸಿದ್ದಾರೆ. ಮಾಹಿತಿ ಮತ್ತು ಗುರುತಿನ ಚೀಟಿ ಮೂಲಕವೇ ಹಣ ಜಮೆ ಮತ್ತು ಬದಲಾವಣೆಗೆ ಅವಕಾಶ ಮಾಡಿಕೊಟ್ಟರೆ, ಅದರಿಂದ ಕಾಳಧನಿಕರ ವಿರುದ್ಧ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಸುಲಭವಾಗುತ್ತದೆ ಮತ್ತು ಜನಸಾಮಾನ್ಯರ ಮೂಲಭೂತ ಹಕ್ಕುಗಳನ್ನು ರಕ್ಷಿಸಲು ಅನುವು ಮಾಡಿಕೊಡುತ್ತದೆ. ಹೀಗಾಗಿ ಈ ಎರಡು ದಾಖಲೆಗಳನ್ನು ಸಂಗ್ರಹಿಸಿದ ಬಳಿಕವೇ ನೋಟು ಜಮೆ ಮತ್ತು ಬದಲಾವಣೆಗೆ ಆರ್‌ಬಿಐ, ಎಸ್‌ಬಿಐಗೆ ಸೂಚಿಸಬೇಕು ಎಂದು ಕೋರಿದ್ದಾರೆ.