ಸ್ಯಾನ್ ಸಾಲ್ವಡಾರ್(ಎಲ್ ಸಾಲ್ವಡಾರ್): ಕ್ರೀಡಾ ಜಗತ್ತು ಮತ್ತೊಮ್ಮೆ ಫುಟ್ಬಾಲ್ ಕ್ರೀಡಾಂಗಣದ ಭೀಕರ ಕಾಲ್ತುಳಿತದ ಅನಾಹುತಕ್ಕೆ ಸಾಕ್ಷಿಯಾಗಿದ್ದು, ಮಧ್ಯ ಅಮೆರಿಕದ ದೇಶವಾದ ಎಲ್ ಸಾಲ್ವಡಾರ್ನ ಮೈದಾನದಲ್ಲಿ ನಡೆದ ಕಾಲ್ತುಳಿತದಲ್ಲಿ ಸುಮಾರು 12 ಮಂದಿ ಮೃತಪಟ್ಟು ಹಲವರು ಗಂಭೀರ ಗಾಯಗೊಂಡ ಘಟನೆ ನಡೆದಿದೆ.
ಇಲ್ಲಿನ ಕಸ್ಕಟ್ಲಾನ್ನ ಕ್ರೀಡಾಂಗಣದಲ್ಲಿ ಸಾಲ್ವಡೊರಾನ್ ಲೀಗ್ನ ಆಲಿಯಾನ್ಜ ಹಾಗೂ ಎಫ್ಎಎಸ್ ತಂಡಗಳ ನಡುವಿನ ಕ್ವಾರ್ಟರ್ ಫೈನಲ್ ಪಂದ್ಯದ ವೇಳೆ ಈ ದುರ್ಘಟನೆ ನಡೆದಿದೆ. ಅಪಾರ ಪ್ರಮಾಣದ ಅಭಿಮಾನಿಗಳು ಒಮ್ಮೆಲೇ ಮೈದಾನಕ್ಕೆ ಪ್ರವೇಶಿಸುವ ವೇಳೆ ಗೇಟ್ ಮುರಿದು ಬಿದ್ದಿದ್ದು, ನೂಕುನುಗ್ಗಲು ಉಂಟಾಗಿದೆ. ಈ ವೇಳೆ ಕಾಲ್ತುಳಿತ ಹಾಗೂ ಉಸಿರುಗಟ್ಟಿಹಲವರು ಸಾವನ್ನಪ್ಪಿದ್ದಾರೆಂದು ತಿಳಿದುಬಂದಿದೆ.
‘9 ಮಂದಿ ಕ್ರೀಡಾಂಗಣದಲ್ಲೇ ಮೃತಪಟ್ಟಿದ್ದಾರೆ. ಮೂವರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ನೂರಾರು ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ. ಕಳೆದ ಅಕ್ಟೋಬರ್ನಲ್ಲಿ ಇಂಡೋನೇಷ್ಯಾದ ಫುಟ್ಬಾಲ್ ಕ್ರೀಡಾಂಗಣದಲ್ಲಿ ಕಾಲ್ತುಳಿತ, ಘರ್ಷಣೆಯಿಂದ 135 ಮಂದಿ ಸಾವನ್ನಪ್ಪಿದ್ದರು.