ದಿನಗಳಲ್ಲ ಗಂಟೆ…! 100 ಗಂಟೆಯಲ್ಲಿ 100 ಕಿಮೀ ರಸ್ತೆ; ಘಾಜಿಯಾಬಾದ್-ಅಲಿಗಡ್ ಎಕ್ಸ್ಪ್ರೆಸ್ವೇ ಹೊಸ ಇತಿಹಾಸ

ನವದೆಹಲಿ: ಇತ್ತೀಚಿನ ವರ್ಷಗಳಲ್ಲಿ ಭಾರತದ ರಸ್ತೆ ಮತ್ತು ರೈಲ್ವೆ ನಿರ್ಮಾಣ ಕಾರ್ಯಗಳಿಗೆ ಹೊಸ ಶಕ್ತಿಸಂಚಯ ಆದಂತಿದೆ. ಹಲವು ಸಾಧನೆ, ಮೈಲಿಗಲ್ಲುಗಳು ನಿರ್ಮಾಣವಾಗುತ್ತಿವೆ. ಇದೀಗ ಉತ್ತರಪ್ರದೇಶದಲ್ಲಿ ಘಾಜಿಯಾಬಾದ್ ಆಲಿಗಡ್ ಎಕ್ಸ್ಪ್ರೆಸ್ವೇ ಹೊಸ ಇತಿಹಾಸ ಬರೆದಿದೆ. ರಾಷ್ಟ್ರೀಯ ಹೆದ್ದಾರಿ 34ರ ಭಾಗವಾಗಿರುವ 118 ಕಿಮೀ ಉದ್ದದ ಈ ಎಕ್ಸ್ಪ್ರೆಸ್ವೇನಲ್ಲಿ 100 ಕಿಮೀ ಉದ್ದದ ರಸ್ತೆಯನ್ನು ಕೇವಲ 100 ಗಂಟೆಯಲ್ಲಿ ನಿರ್ಮಿಸಲಾಗಿದೆ. 100 ಗಂಟೆ ಎಂದರೆ ಸುಮಾರು 4 ದಿನ ಮಾತ್ರ


ಈ ಸಾಧನೆ ಸಾಧ್ಯವಾಗಿದ್ದು ಒಂದು ಸ್ಪೆಷಲ್ ಪರ್ಪೋಸ್ ವೆಹಿಕಲ್ನಿಂದ (ಎಸ್ಪಿವಿ). ಈ ಎಕ್ಸ್ಪ್ರೆಸ್ವೇಗೆ ಬಿಟುಮಿನಸ್ ಕಾಂಕ್ರೀಟ್ ಹಾಕಲು ಈ ವಿಶೇಷ ವಾಹನ ಬಳಸಲಾಗಿದೆ. ಕ್ಯೂಬ್ ಹೈವೇಸ್, ಎಲ್ ಅಂಡ್ ಟಿ, ಘಾಜಿಯಾಬಾದ್ ಆಲಿಗಡ್ ಎಕ್ಸ್ಪ್ರೆಸ್ವೇ ಸಂಸ್ಥೆಗಳು ಈ ರಸ್ತೆ ನಿರ್ಮಾಣದಲ್ಲಿ ಭಾಗಿಯಾಗಿದ್ದವು.

ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಈ ಕಾರ್ಯವನ್ನು ಶ್ಲಾಘಿಸಿ ಇದು ದೇಶಕ್ಕೆ ಹೆಮ್ಮೆಯ ಕ್ಷಣ ಎಂದು ಕೊಂಡಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಕೂಡ ಶಹಬ್ಬಾಸ್ಗಿರಿ ನೀಡಿದ್ದಾರೆ.
‘ಭಾರತದ ರಸ್ತೆ ಸೌಕರ್ಯ ಉದ್ಯಮದ ಬದ್ಧತೆಗೆ ಸಾಕ್ಷಿಯಾಗಿದೆ ಈ ಸಾಧನೆ. ಕ್ಯೂಬ್ ಹೈವೇಶ್, ಎಲ್ ಅಂಡ್ ಮತ್ತು ಘಾಜಿಯಾಬಾದ್ ಆಲಿಗಡ್ ಎಕ್ಸ್ಪ್ರೆಸ್ವೇ ಸಂಸ್ಥೆಗಳಿಗೆ ಧನ್ಯವಾದ ಹೇಳುತ್ತೇನೆ’ ಎಂದು ನಿತಿನ್ ಗಡ್ಕರಿ ಟ್ವೀಟ್ ಮಾಡಿದ್ದಾರೆ.