16 ನೇ ರಾಷ್ಟ್ರಪತಿ ಆಯ್ಕೆಗೆ ಬಿರುಸಿನ ಮತದಾನ

ನವದೆಹಲಿ: ಹದಿನಾರನೇ ರಾಷ್ಟ್ರಪತಿ ಆಯ್ಕೆಗೆ ಇಂದು ಬೆಳಿಗ್ಗೆ 10 ಗಂಟೆಯಿಂದ ಮತದಾನ ಆರಂಭವಾಗಿದೆ. ಪ್ರಧಾನಿ ನರೇಂದ್ರ ಮೋದಿ, ಮಾಜಿ ಪ್ರಧಾನಿ ಮನಮೋಹನ್‌ಸಿಂಗ್ ಸೇರಿದಂತೆ ಹಲವು ರಾಜ್ಯಗಳ ಮುಖ್ಯಮಂತ್ರಿಗಳು, ಶಾಸಕರು ಮತ ಚಲಾಯಿಸಿದ್ದಾರೆ.

ಸಂಸದರು ಮತ್ತು ರಾಜ್ಯಗಳ ವಿಧಾನಸಭೆಯ ಸದಸ್ಯರು ಸೇರಿ ಅಂದಾಜು 4,800 ಮತದಾರರು ಈ ಚುನಾವಣೆಯಲ್ಲಿ ಮತದಾನ ಮಾಡಲಿದ್ದು ಈ ವರೆಗೆ ಒಟ್ಟು 136 ಕ್ಕೂ ಹೆಚ್ಚು ಮತದಾನವಾಗಿದೆ.

ಮುಂದಿನ ರಾಷ್ಟ್ರಪತಿಯಾಗಿ ಎನ್‌ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಗೆಲುವು ಬಹುತೇಕ ಖಚಿತ ಎನಿಸಿದೆ. ಬಿಜೆಡಿ, ವೈಎಸ್‌ಆರ್‌ಸಿಪಿ, ಬಿಎಸ್‌ಪಿ, ಎಐಎಡಿಎಂಕೆ, ಟಿಡಿಪಿ, ಜೆಡಿಎಸ್, ಶಿರೋಮಣಿ ಅಕಾಲಿದಳ, ಶಿವಸೇನೆ ಮತ್ತು ಜೆಎಂಎಂ ಪಕ್ಷಗಳು ಮುರ್ಮು ಅವರಿಗೆ ಈಗಾಗಲೇ ಬೆಂಬಲ ಸೂಚಿಸಿದೆ. ಇನ್ನು ಪ್ರತಿಪಕ್ಷದ ಅಭ್ಯರ್ಥಿ ಯಶವಂತ್ ಸಿನ್ಹಾ ಅವರಿಗೆ ಕಾಂಗ್ರೆಸ್ ಸೇರಿದಂತೆ ಇತರ ಪ್ರತಿಪಕ್ಷಗಳು ಬೆಂಬಲ ಸೂಚಿಸಿವೆ.

ಸಂಜೆ 5 ಗಂಟೆಯವರೆಗೆ ಚುನಾವಣೆ ನಡೆಯಲಿದ್ದು ಜು. 21 ರಂದು ಮತ ಎಣಿಕೆ ನಡೆಯಲಿದೆ. ಜು.25 ರಂದು ನೂತನ ರಾಷ್ಟ್ರಪತಿಗಳು ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಇನ್ನು ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿಯಾಗಿರುವ ದ್ರೌಪದಿ ಮುರ್ಮು ಅವರು ಯಶವಂತ ಸಿನ್ಹಾ ವಿರುದ್ಧ ಗೆಲುವು ಸಾಧಿಸುವ ಸಾಧ್ಯತೆ ಇದೆ. ಒಂದು ವೇಳೆ ಮುರ್ಮು ಅವರು ರಾಷ್ಟ್ರಪತಿಯಾಗಿ ಚುನಾಯಿತರಾದರೆ, ದೇಶದ ಅತ್ಯುನ್ನತ ಸಾಂವಿಧಾನಿಕ ಹುದ್ದೆಯನ್ನು ಅಲಂಕರಿಸಿದ ಬುಡಕಟ್ಟು ಸಮುದಾಯದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.

ಶಾಸಕರು ಆಯಾ ರಾಜ್ಯಗಳ ವಿಧಾನಸಭೆಯಲ್ಲಿ ಮತ್ತು ಸಂಸದರು ತಮ್ಮ ರಾಜ್ಯಗಳ ಮತಕೇಂದ್ರ ಅಥವಾ ದೆಹಲಿಯ ಸಂಸತ್ ಭವನದಲ್ಲಿ ಮತದಾನ ಮಾಡಬಹುದಾಗಿದೆ. ಜಮ್ಮು-ಕಾಶ್ಮೀರ ವಿಧಾನಸಭೆ ವಿಸರ್ಜನೆ ಆಗಿರುವ ಕಾರಣ ಪ್ರತಿ ಸಂಸದರ ಮತಮೌಲ್ಯ 708 ರಿಂದ 700 ಕ್ಕೆ ಇಳಿದಿದೆ. ಶಾಸಕರ ಮತಮೌಲ್ಯವು ಆಯಾ ರಾಜ್ಯಗಳ ಜನಸಂಖ್ಯೆಗೆ ಅನುಗುಣವಾಗಿ ಇರಲಿದೆ.

Leave a Reply

Your email address will not be published. Required fields are marked *