ಚಿತ್ರದುರ್ಗ: ಜನಪ್ರಿಯತೆ ಮೈಗಂಟಿಸಿಕೊಂಡು ಅನಭಿಷಿಕ್ತ ದೊರೆಯೆಂದೇ ಖ್ಯಾತಿ ಪಡೆದಿದ್ದ ಮಾಜಿ ಶಾಸಕ ತಿಪ್ಪಾರೆಡ್ಡಿ, ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಹೀನಾಯ ಸೋಲಿಗೆ ಒಳಗಾಗಿದ್ದಾರೆ. ತಮ್ಮ ರಾಜಕೀಯ ಭವಿಷ್ಯ ಬಲಿಕೊಡಲು ಚಿತ್ರದುರ್ಗಲ್ಲಿನ ಅವೈಜ್ಞಾನಿಕ ಡಿವೈಡರ್‌ಗಳು ಕಾರಣವಾದವಾ ?
ವಿಧಾನಸಭೆ ಚುನಾವಣಾ ಫಲಿತಾಂಶ ಪ್ರಕಟವಾದ ನಂತರ ಚಿತ್ರದುರ್ಗದಲ್ಲಿ ಇಂತಹದ್ದೊಂದು ಅಭಿಪ್ರಾಯಗಳು ಹರಿದಾಡುತ್ತಿವೆ. ಜನರನ್ನು ಕೇಳದೆ, ರೋಡ್ ಕಲ್ಚರ್ ಪರಿಗಣನೆಗೆ ತೆಗೆದುಕೊಳ್ಳದೆ, ಸಂಚಾರಿ ನಿಯಮಗಳ ಪಾಲನೆ ಮಾಡದೆ, ಹಠಕ್ಕೆ ಬಿದ್ದವರಂತೆ ಡಿವೈಡರ್ ಅಳವಡಿಕೆ ಮಾಡಿ ಚಿತ್ರದುರ್ಗದಲ್ಲಿ ವ್ಯವಹಾರ ಹಾಳು ಮಾಡಿದರು. ರಸ್ತೆಗಳ ವಿರೂಪ ಮಾಡಿದರು. ತೊಂದರೆ ಆಗುತ್ತದೆ ಎಂದು ಅಲವತ್ತುಕೊಂಡವರ ಗದರಿ ಕಳಿಸಿದರು. ಈ ಕಾರಣಕ್ಕಾಗಿಯೇ ವೋಟಿನ ಮೂಲಕ ಜನ ಪಾಠ ಕಲಿಸಿದರೆಂಬುದು ಸೋಲಿಗೆ ಕಾರಣವಾದ ಅಂಶಗಳಲ್ಲಿ ಇದೂ ಒಂದು.
ಡಿವೈಡರ್ ಅವೈಜ್ಞಾನಿಕವೆಂಬುದರಲ್ಲಿ ಎರಡು ಮಾತಿಲ್ಲ. ಚೈನಾ ಗೋಡೆಗಳಂತೆ ನಿರ್ಮಾಣ ಮಾಡುವ ಉದ್ದೇಶಗಳು ಅರ್ಥವಾಗುತ್ತಿಲ್ಲ. ಹಾಗೊಂದು ವೇಳೆ ಡಿವೈಡರ್ ನಿರ್ಮಾಣದಲ್ಲಿ ತಿಪ್ಪಾರೆಡ್ಡಿ ಅವರ ಪಾತ್ರವಿಲ್ಲ, ಅಧಿಕಾರಿಗಳು ತಮ್ಮ ವಿವೇಚನೆಯಿಂದ ನಿರ್ಮಿಸಿದ್ದಾರೆಂದು ಹೇಳುವಂತಿಲ್ಲ. ಏಕೆಂದರೆ ಜನರಿಗೆ ತೊಂದರೆ ಆಗುತ್ತದೆ ಎಂದು ಅಧಿಕಾರಿಗಳ ಗದರಿಕೊಳ್ಳುವ ಕೆಲಸವನ್ನು ಜನಪ್ರತಿನಿಧಿಗಳು ಮಾಡಬಹುದಿತ್ತು.
ಜೆಸಿಆರ್ ಬಡಾವಣೆ, ಜೈಲು ರಸ್ತೆ, ಜೋಗಿಮಟ್ಟಿ ರಸ್ತೆ, ಡಿಸಿಸಿ ಬ್ಯಾಂಕ್ ಮುಂಭಾಗ, ಕೆಎಸ್‌ಆರ್‌ಟಿಸಿ ನಿಲ್ದಾಣಕ್ಕೆ ಹೋಗುವ ಮಾರ್ಗ, ಇದೂ ಸಾಲದೆಂಬಂತೆ ಅಗ್ನಿಶಾಮಕ ಕಚೇರಿ ಮುಂಭಾಗದಿಂದ ಮೆದೆಹಳ್ಳಿ ಕಡೆಗೆ ಹೋಗುವ ರಸ್ತೆಯಲ್ಲಿಯೂ ಡಿವೈಡರ್ ಅಳವಡಿಸಲಾಗಿದೆ. ಇಂಡಿಯನ್ ರೋಡ್ ಕಾಂಗ್ರೆಸ್ ನಿಯಮಾವಳಿ ಪ್ರಕಾರ ಇವೆಲ್ಲವೂ ಅವೈಜ್ಞಾನಿಕವೇ ಆಗಿದೆ. ಸರ್ಕಾರಿ ಅನುದಾನ ಪೂರ್ಣ ಪ್ರಮಾಣದಲ್ಲಿ ಅಪವ್ಯಯ ಹಾಗೂ ದುರ್ಬಳಕೆ.
ಎದೆ ಮಟ್ಟದ ಡಿವೈಡರ್, ಅವುಗಳ ಮೇಲೆ ಅಲಂಕಾರಿಕ ಗಿಡ, ಗಿಡ ಪೋಷಣೆ ಮಾಡಲು ಹನಿ ನೀರಾವರಿ ಅಳವಡಿಕೆ, ಸರ್ಕಾರಿ ಅನುದಾನದ ದುರ್ಬಳಕೆ ಹೀಗೆ ಸಾಗುತ್ತದೆ. ಅಲಂಕಾರಿಕ ಗಿಡ ನೆಡಲು 1.80 ಕೋಟಿ ರುಪಾಯಿ ವ್ಯಯ ಮಾಡಲಾಗಿದೆ. ಡಿವೈಡರ್ ನಿರ್ಮಿಸುವಾಗ ಅಗತ್ಯ ಇರುವ ಕಡೆ ಯೂಟರ್ನ್ ನೀಡಲಾಗಿಲ್ಲ. ಹಾಗಾಗಿ ಪ್ರಮುಖ ರಸ್ತೆಗಳಲ್ಲಿನ ವ್ಯಾಪಾರ ವಹಿವಾಟು ಬಿದ್ದು ಹೋಗಿತ್ತು. ಇದರಿಂದ ವ್ಯಾಪಾರಸ್ತರು ರೊಚ್ಚಿಗೆದ್ದಿದ್ದರು. ಡಿವೈಡರ್ ಒಡೆಯುವವರಿಗೆ ನಮ್ಮ ಮತ ಎಂಬಂತಹ ಮಾನಸಿಕ ಸಿದ್ಧತೆಗೆ ಅವರೆಲ್ಲ ಒಳಗಾಗಿದ್ದರು. ಪರಿಣಾಮ ರೊಚ್ಚಿಗೆದ್ದವರಂತೆ ಮತಗಟ್ಟೆಗೆ ಹೋಗಿ ತಿಪ್ಪಾರೆಡ್ಡಿ ವಿರುದ್ಧ ಗುಂಡಿ ಒತ್ತಿ ಬಂದಿದ್ದಾರೆ.
ಡಿವೈಡರ್ ಬೇಕು ಎಂದು ಯಾರೂ ಕೇಳಿರಲಿಲ್ಲ. ಕಾರು ಹೋಗಲು ತ್ರಾಸದಾಯಕ ಸ್ಥಳದಲ್ಲಿ ಡಿವೈಡರ್ ಹಾಕಲಾಗಿದೆ. ಹಾಗಾಗಿ ನೊಂದವರು, ಸಾವು ನೋವಿಗೆ ಈಡಾದ ಕುಟುಂಬಗಳು ಮತ ಚಲಾಯಿಸುವಾಗ ಸೇಡು ತೀರಿಸಿಕೊಂಡಿದ್ದಾರೆ. ಸುಮಾರು 53 ಸಾವಿರ ಮತಗಳ ಅಂತರದಿಂದ ತಿಪ್ಪಾರೆಡ್ಡಿ ಸೋಲುತ್ತಾರೆಂದು ಯಾರೂ ಊಹಿಸಿರಲಿಲ್ಲ. ಅಷ್ಟರ ಮಟ್ಟಿಗೆ ಡಿವೈಡರ್ ಆಕ್ರೋಶಗಳು ಜನರಲ್ಲಿ ಮನೆ ಮಾಡಿದ್ದವು.