ಸರ್ಕಾರ ರಚಿಸುವ ಮೊದಲೇ ಕಾಂಗ್ರೆಸ್ಸಿನಿಂದ ಹತ್ಯೆಯ ಗ್ಯಾರಂಟಿ – ಬಿಜೆಪಿ ಕಾರ್ಯಕರ್ತನ ಕೊಲೆಗೆ ಅಶ್ವಥ್ ನಾರಾಯಣ ಆಕ್ರೋಶ

ಬೆಂಗಳೂರು: ವಿಧಾನಸಭೆ ಚುನಾವಣೆಯ ಫಲಿತಾಂಶ (Karnataka Election Results) ಪ್ರಕಟಗೊಂಡ ಕೆಲವೇ ಗಂಟೆಗಳ ಬಳಿಕ ಬಿಜೆಪಿ ಕಾರ್ಯಕರ್ತರೊಬ್ಬರ (BJP Worker) ಹತ್ಯೆಯಾಗಿದೆ. ಸರ್ಕಾರ ರಚಿಸುವ ಮೊದಲೇ ಬಿಜೆಪಿ ಕಾರ್ಯಕರ್ತರ ಹತ್ಯೆಯ ಗ್ಯಾರಂಟಿ ಈಡೇರಿಸಿದ್ದಾರೆ ಎಂದು ಅಶ್ವಥ್ ನಾರಾಯಣ (Ashwath Narayan) ಕಾಂಗ್ರೆಸ್ (Congress) ವಿರುದ್ಧ ಕಿಡಿಕಾರಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ನಾರಾಯಣ, ಸರ್ಕಾರ ರಚಿಸುವ ಮೊದಲೇ ಬಿಜೆಪಿ ಕಾರ್ಯಕರ್ತರ ಹತ್ಯೆಯ ಗ್ಯಾರಂಟಿಯನ್ನು ಈಡೇರಿಸಿದ ಕಾಂಗ್ರೆಸ್ಸಿಗರು ದ್ವೇಷದ ಹಾಗೂ ದರ್ಪದ ರಾಜಕಾರಣವನ್ನು ಅವರ ಎಂದಿನ ಚಾಳಿಯಂತೆ ಮುಂದುವರಿಸಿದ್ದಾರೆ.

ಹೊಸಕೋಟೆಯ ನಮ್ಮ ಪಕ್ಷದ ಕಾರ್ಯಕರ್ತನ ಮೇಲೆ ಹಲ್ಲೆ ಮಾಡಿ, ಕೊಲೆ ಮಾಡಿರುವುದು ಖಂಡನೀಯ. ಆರೋಪಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸುತ್ತಿದ್ದೇನೆ ಎಂದು ಬರೆದಿದ್ದಾರೆ.
ಘಟನೆಯೇನು?
ಚುನಾವಣೆಯ ಫಲಿತಾಂಶ ಪ್ರಕಟಗೊಂಡ ಕೆಲವೇ ಗಂಟೆಗಳಲ್ಲಿ ಬೆಂಗಳೂರಿನ ಹೊಸಕೋಟೆಯಲ್ಲಿ ಮಾಜಿ ಸಚಿವ ಎಂಟಿಬಿ ನಾಗರಾಜ್ ಅವರ ಬೆಂಬಲಿಗನ ಕೊಲೆ ನಡೆದಿದೆ. ಫಲಿತಾಂಶ ಪ್ರಕಟಗೊಂಡ ಬೆನ್ನಲ್ಲೇ ಕಾಂಗ್ರೆಸ್ ಬೆಂಬಲಿಗರು ಪಟಾಕಿ ಹಚ್ಚಿ ಸಂಭ್ರಮಿಸುತ್ತಿದ್ದ ವೇಳೆ ಆರಂಭವಾದ ಘಟನೆ ಕೊಲೆಯಲ್ಲಿ ಅಂತ್ಯವಾಗಿದೆ.
ಎಂಟಿಬಿ ನಾಗರಾಜ್ ಅವರ ಬೆಂಬಲಿಗ ಕೃಷ್ಣಪ್ಪ (56) ಕೊಲೆಯಾದ ವ್ಯಕ್ತಿ. ಕಾಂಗ್ರೆಸ್ ಬೆಂಬಲಿಗ ಆದಿತ್ಯ ತನ್ನ ದೊಡ್ಡಪ್ಪನನ್ನೇ ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಕೃಷ್ಣಪ್ಪ ಹಾಗೂ ಅವರ ಸಹೋದರ ಗಣೇಶಪ್ಪನ ನಡುವೆ ಚುನಾವಣೆ ಸೋಲಿನ ವಿಚಾರವಾಗಿ ಗಲಾಟೆ ಪ್ರಾರಂಭವಾಗಿದ್ದು, ಬಳಿಕ ಗಣೇಶಪ್ಪನ ಮಗ ಆದಿತ್ಯ ಚಾಕುವಿನಿಂದ ಇರಿದು ಕೃಷ್ಣಪ್ಪ ಅವರ ಹತ್ಯೆ ನಡೆಸಿದ್ದಾನೆ. ನಂದನಗುಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ವರದಿಯಾಗಿದೆ.
ಹತ್ಯೆಯ ಬಳಿಕ ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರು ಪೊಲೀಸ್ ಠಾಣೆಯ ಮುಂಭಾಗ ಶವವನ್ನಿಟ್ಟು ಪ್ರತಿಭಟನೆ ನಡೆಸಿದ್ದಾರೆ. ರಾಜಕೀಯ ದ್ವೇಶದಿಂದ ನಡೆದಿರುವ ಕೊಲೆ ಎಂದು ಆರೋಪಿಸಿದ ಬಿಜೆಪಿ ಮುಖಂಡರು ಆರೋಪಿಯನ್ನು ಶೀಘ್ರವೇ ಬಂಧಿಸಬೇಕೆಂದು ಆಗ್ರಹಿಸಿದ್ದಾರೆ