ಬೆಂಗಳೂರು: ಕರ್ನಾಟಕ ಸಾರ್ವತ್ರಿಕ ವಿಧಾನಸಭಾ ಚುನಾವಣೆಗೆ ಮೇ 10 ರಂದು ಮತದಾನ ನಡೆಯಲಿದೆ. ಮತದಾನಕ್ಕೆ ಕೌಂಟ್‌ಡೌನ್ ಶುರುವಾಗಿದ್ದು, ಅಧಿಕಾರಿಗಳು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗುತ್ತಿದ್ದಾರೆ. ಬೆಂಗಳೂರಿನಲ್ಲಿ ಸಿಬ್ಬಂದಿಯೊಬ್ಬರು ತನ್ನ ಪುಟ್ಟ ಕಂದಮ್ಮನೊಂದಿಗೆ ಚುನಾವಣಾ ಕರ್ತವ್ಯಕ್ಕೆ ಹಾಜರಾಗಿ ಗಮನ ಸೆಳೆದರು.
ಮಲ್ಲೇಶ್ವರಂ ಮತಗಟ್ಟೆಯಲ್ಲಿ ಕರ್ತವ್ಯಕ್ಕೆ ಈ ಮಹಿಳೆಯನ್ನು ನಿಯೋಜಿಸಲಾಗಿತ್ತು. ತನ್ನ ಪುಟ್ಟ ಕಂದಮ್ಮನೊಂದಿಗೆ ಮಹಿಳೆ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಆ ಮೂಲಕ ಕರ್ತವ್ಯದ ಜವಾಬ್ದಾರಿ ಮೆರೆದಿದ್ದಾರೆ.
ನಾಳೆ ಚುನಾವಣೆ ನಡೆಯಲಿದ್ದು, ಬೆಂಗಳೂರಿನಲ್ಲೂ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಕುರಿತು ಬೆಂಗಳೂರು ಚುನಾವಣಾಧಿಕಾರಿ ತುಷಾರ್ ಗಿರಿನಾಥ್ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ.
ಬೆಂಗಳೂರು ಜಿಲ್ಲೆಯಲ್ಲಿ ಒಟ್ಟು 8,802 ಮತಗಟ್ಟೆಗಳಿಗೆ ಮಂಗಳವಾರ ಸಿಬ್ಬಂದಿ ತೆರಳಲಿದ್ದಾರೆ. 42 ಸಾವಿರ ಸಿಬ್ಬಂದಿಯನ್ನು ಚುನಾವಣಾ ಕೆಲಸಕ್ಕೆ ನಿಯೋಜನೆ ಮಾಡಿದ್ದೇವೆ. ಮಸ್ಟರಿಂಗ್ ಸೆಂಟರ್‌ನಲ್ಲಿ ತಿಂಡಿ, ಊಟದ ವ್ಯವಸ್ಥೆ ಮಾಡಿದ್ದೇವೆ. ನಿಯೋಜಿತ ಸಿಬ್ಬಂದಿ ಆಯಾ ಮಸ್ಟರಿಂಗ್ ಸೆಂಟರ್‌ಗಳಲ್ಲಿ ಇವಿಎಂ ಪಡೆದು ಇಂದು ಸಂಜೆ ವೇಳೆಗೆ ಮತಗಟ್ಟೆಗೆ ತೆರಳುತ್ತಾರೆ. ನಾವು ಈಗಾಗ್ಲೇ ರೂಟ್ ಮ್ಯಾಪ್ ಫಿಕ್ಸ್ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.