ಹಾವೇರಿ: ಚುನಾವಣೆಗೆ ಇನ್ನೂ ಮೂರು ದಿನಗಳು ಬಾಕಿಯಿದ್ದು, ಸತತವಾಗಿ ಐಟಿ ಅಧಿಕಾರಿಗಳು ದಾಳಿ ಮುಂದುವರಿಸಿದ್ದಾರೆ. ಜಿಲ್ಲೆಯ ಕಾಂಗ್ರೆಸ್ ಮುಖಂಡ ಚನ್ನಬಸಪ್ಪ ಹುಲ್ಲತ್ತಿ ಮನೆ ಮೇಲೆ ಬೆಳ್ಳಂಬೆಳಗ್ಗೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು, 2.85 ಕೋಟಿ ಹಣ ವಶಪಡಿಸಿಕೊಂಡಿದ್ದಾರೆ.
ಬ್ಯಾಡಗಿ ಪಟ್ಟಣದ ವಿದ್ಯಾನಗರದಲ್ಲಿರುವ ಚನ್ನಬಸಪ್ಪ ಮನೆ ಮೇಲೆ ಭಾನುವಾರ ಬೆಳಗ್ಗೆ ದಾಳಿ ನಡೆಸಿದ ಐಟಿ ಅಧಿಕಾರಿಗಳು ದಾಖಲೆಯಿಲ್ಲದ ಕೋಟ್ಯಂತರ ರೂಪಾಯಿ ಹಣವನ್ನ ವಶಕ್ಕೆ ಪಡೆದುಕೊಂಡಿದ್ದಾರೆ. ಬ್ಯಾಡಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಐಟಿ ಅಧಿಕಾರಿಗಳು ದಾಖಲೆ ಪರಿಶೀಲಿಸುತ್ತಿದ್ದಾರೆ.
ಎಪಿಎಂಸಿ ಮಾಜಿ ಅಧ್ಯಕ್ಷನಾಗಿರುವ ಚನ್ನಬಸಪ್ಪ ಹುಲ್ಲತ್ತಿ, CKLE ಅಂಡ್ ಸನ್ಸ್ ಮೇಣಸಿನಕಾಯಿ ದಲಾಲ ಅಂಗಡಿಯಲ್ಲಿ ಕೇಲಸ ಮಾಡುತ್ತಿದ್ದರು. ಜೊತೆಗೆ ಬ್ಯಾಡಗಿ ಕಾಂಗ್ರೆಸ್ ಅಭ್ಯರ್ಥಿಯ ಜೊತೆ ನಿಕಟ ಸಂಬಂಧ ಹೊಂದಿದ್ದರು. ಬ್ಯಾಡಗಿಯಲ್ಲಿ ನಡೆಯುವ ಕಾಂಗ್ರೆಸ್ ಕಾರ್ಯಕ್ರಮಗಳ ಉಸ್ತುವಾರಿಯನ್ನು ತಾವೇ ನೋಡಿಕೊಳ್ತಾ ಇದ್ರು. ಇದೀಗ ಚನ್ನಬಸಪ್ಪ ಮನೆ ಮೇಲೆ ದಾಳಿ ನಡೆದಿರುವುದು ಉದ್ದೇಶಪೂರ್ವಕವಾಗಿ ಮಾಡಲಾಗಿದೆ ಎಂದು ಕೈ ಕಾರ್ಯಕರ್ತರು ಆರೋಪಿಸಿದ್ದಾರೆ. ಸದ್ಯ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿರುವ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ.