ಹೊಳಲ್ಕೆರೆ: ಹೊಳಲ್ಕೆರೆ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಚ್.ಆಂಜನೇಯ ಪ್ರಚಾರವನ್ನು ಮತ್ತಷ್ಟುತೀವ್ರಗೊಳಿಸಿದ್ದು, ನಟಿ ಭಾವನಾ ಉರಿ ಬಿಸಿಲನ್ನು ಲೆಕ್ಕಿಸದೆ ಶುಕ್ರವಾರ ರಾರಯಲಿಯಲ್ಲಿ ಪಾಲ್ಗೊಂಡು ಮತಯಾಚಿಸಿದರು.
ಹಿರೇಕಂದವಾಡಿ, ಕಲ್ಲವ್ವನಾಗ್ತಿಹಳ್ಳಿ, ಬಿ.ದುರ್ಗದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಭಾವನಾ, ಸುಳ್ಳುಗಳ ಸರಮಾಲೆ, ಕೋಮು ಸಂಘರ್ಷದ ಮೂಲಕ ಅಧಿಕಾರಕ್ಕೆ ಬಂದಿರುವ ಬಿಜೆಪಿ ಯುವ ಪೀಳಿಗೆಯ ಬದುಕಿಗೆ ಕಂಟಕವಾಗಿದೆ. ಈಗಾಗಲೇ ನಿರುದ್ಯೋಗ, ಬೆಲೆ ಏರಿಕೆ, ಖಾಸಗೀಕರಣದಿಂದ ಯುವಪೀಳಿಗೆ, ರೈತರು, ಕಾರ್ಮಿಕರ ಬದುಕು ಮೂರಾಬಟ್ಟೆಯಾಗಿದ್ದು, ನರೇಂದ್ರ ಮೋದಿ ಬಣ್ಣದ, ಸುಳ್ಳಿನ ಮಾತಿಗೆ ಮಾರು ಹೋದರೆ ಯುವ ಪೀಳಿಗೆ ವಿನಾಶದ ಅಂಚಿಗೆ ತಲುಪುವುದು ಖಚಿತ ಎಂದರು.
ಗುತ್ತಿಗೆದಾರರ ಆತ್ಮಹತ್ಯೆ ಬಗ್ಗೆ ಮೋದಿ ಮಾತಾಡುತ್ತಿಲ್ಲ:
ನುಡಿದಂತೆ ನಡೆಯುವ ಪಕ್ಷ ಅಂದರೆ ಅದು ಕಾಂಗ್ರೆಸ್ ಮಾತ್ರ. ಸಿದ್ದರಾಮಯ್ಯ ಅವರ ಅವಧಿಯಲ್ಲಿ ಸರ್ವರಿಗೂ ಸಮಾನ ಅವಕಾಶಗಳನ್ನು ಕಲ್ಪಿಸಿದೆ ಎಂದು ನಟಿ ಭಾವನಾ ಹೇಳಿದರು. ಇದೀಗ ಕಾಂಗ್ರೆಸ್ ಪಕ್ಷದ 10 ಕೆಜಿ ಪಡಿತರ, 200 ಯುನಿಟ್ ವಿದ್ಯುತ್, 3000 ನಿರುದ್ಯೋಗಿ ಭತ್ಯೆ, ಮನೆ ಒಡತಿಗೆ 2000, ಎಲ್ಲ ಮಹಿಳೆಯರಿಗೆ ಉಚಿತ ಬಸ್ ಸೌಲಭ್ಯದ ಭರವಸೆ ನೀಡಿದೆ.
ಇವು ಜನಸಾಮಾನ್ಯರಿಗೆ ಅತ್ಯವಶ್ಯಕವಾಗಿವೆ ಎಂದರು. ಕಾಂಗ್ರೆಸ್ ಆಡಳಿತದಲ್ಲಿ ಬಡವರು, ಶ್ರೀಮಂತರು ಎನ್ನದೇ ಸರ್ವರಿಗೂ ಸಮಾನ ಅವಕಾಶಗಳನ್ನು ನೀಡಲಾಗುತ್ತಿತ್ತು. ಇದೀಗ ಬಿಜೆಪಿ ಸರ್ಕಾರದಲ್ಲಿ ಶೇ.40 ಪರ್ಸೆಂಟೇಜ್ ಭ್ರಷ್ಟಾಚಾರ ಕೂಪಕ್ಕೆ ಅನೇಕ ಗುತ್ತಿಗೆದಾರರು ತಮ್ಮ ಪ್ರಾಣವನ್ನೆ ಕಳೆದುಕೊಂಡಿದ್ದಾರೆ. ಇದನ್ನ ಕಾಂಗ್ರೆಸ್ ಪಕ್ಷದವರು ಆರೋಪಿಸುತ್ತಿಲ್ಲ . ಬದಲಿಗೆ ಗುತ್ತಿಗೆದಾರರೇ, ಅವರ ಪಕ್ಷದ ಶಾಸಕರೇ ನೇರ ಆರೋಪ ಮಾಡಿದ್ದಾರೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಚಕಾರವೆತ್ತುತ್ತಿಲ್ಲ. ಎಂದು ಹೇಳಿದರು.