ಅಕ್ರಮವಾಗಿ ನೆಲೆಸಿದ್ದ ಪಾಕಿಸ್ತಾನಿ ಯುವತಿಯ ಬಂಧನ

ಬೆಂಗಳೂರು: ಅಕ್ರಮವಾಗಿ ನೆಲೆಸಲು ತನ್ನ ಗುರುತನ್ನು ನಕಲಿ ಮಾಡಿದ್ದ 19 ವರ್ಷದ ಪಾಕಿಸ್ತಾನಿ ಯುವತಿಯನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇಕ್ರಾ ಜೀವನಿ ಎಂಬಾಕೆಯನ್ನು ಬಂಧಿಸಿರುವ ಪೊಲೀಸರು, ವಿದೇಶಿಗರ ಪ್ರಾದೇಶಿಕ ನೋಂದಣಿ ಕಚೇರಿ ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ.

ಪಾಕಿಸ್ತಾನದ ನಿವಾಸಿ ಇಕ್ರಾ, ಕೆಲ ತಿಂಗಳ ಹಿಂದೆ ಡೇಟಿಂಗ್ ಆ್ಯಪ್‌ ಮೂಲಕ ಉತ್ತರ ಪ್ರದೇಶದ ಮುಲಾಯಂ ಸಿಂಗ್ (25) ನನ್ನು ಪರಿಚಯ ಮಾಡಿ ಕೊಂಡಿದ್ದಳು. ಅವರಿಬ್ಬರ ನಡುವೆ ಪ್ರೀತಿ ಹುಟ್ಟಿಕೊಂಡಿತ್ತು. 2022 ರಲ್ಲಿ ನೇಪಾಳದ ಗಡಿ ಮೂಲಕ ದೇಶದೊಳಗೆ ನುಸುಳಿದ್ದ ಇಕ್ರಾ, ಮುಲಾಯಂಸಿಂಗ್ ನನ್ನು ಮದುವೆಯಾಗಿದ್ದಾಳೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಮುಲಾಯಂ ಸಿಂಗ್ ಯಾದವ್ (25) ಭದ್ರತಾ ಸಿಬ್ಬಂದಿಯಾಗಿದ್ದು, ಈತನನ್ನೂ ಬೆಳ್ಳಂದೂರು ಪೊಲೀಸರು ಬಂಧಿಸಿದ್ದಾರೆ.

ಇಕ್ರಾ ಹೆಸರನ್ನು ರಾವ್ ಯಾದವ್ ಎಂದು ಬದಲಾಯಿಸಿ ಆಧಾರ್ ಕಾರ್ಡ್ ಪಡೆದಿದ್ದರು, ನಂತರ ಭಾರತೀಯ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಇಕ್ರಾ ಇತ್ತೀಚೆಗೆ ಪಾಕಿಸ್ತಾನದಲ್ಲಿರುವ ತಮ್ಮ ಪೋಷಕರನ್ನು ಸಂಪರ್ಕಿಸಲು ಯತ್ನಿಸಿದ್ದರು. ಈ ಸಂಗತಿಯನ್ನು ಪತ್ತೆ ಮಾಡಿದ್ದ ಕೇಂದ್ರ ಗುಪ್ತದಳ, ಬೆಂಗಳೂರು ಪೊಲೀಸರಿಗೆ ಮಾಹಿತಿ ನೀಡಿದ್ದರು. ವಿಶೇಷ ತಂಡ ರಚಿಸಿ ಖಚಿತ ಮಾಹಿತಿ ಮೇರೆಗೆ ಜ. 20 ದಾಳಿ ನಡೆಸಿ ಇಕ್ರಾ ಹಾಗೂ ಮುಲಾಯಂ ಸಿಂಗ್ ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ. 

ಇಕ್ರಾ ಪಾಕಿಸ್ತಾನ ನಿವಾಸಿ ಎಂಬುದು ತಿಳಿದುಬಂದ ಬಳಿಕವೇ ಅವರನ್ನು ಬಂಧಿಸಲಾಯಿತು. ಪಾಕಿಸ್ತಾನದ ಯಾವುದೇ ಬೇಹುಗಾರಿಕೆಯ ಭಾಗವಾಗಿರುವ ಬಗ್ಗೆ ಪರಿಶೀಲಿಸಲು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.