ಯಲ್ಲಾಪುರ: ಯಕ್ಷಗಾನದ ಸವ್ಯಸಾಚಿ ಕಲಾವಿದ, ಯಕ್ಷಗುರು ಗಣಪತಿ ಭಾಗ್ವತ ಕವಾಳೆ ಅವರಿಗೆ ಯಕ್ಷಗಾನ ಅಕಾಡೆಮಿಯ ಯಕ್ಷಸಿರಿ ಪ್ರಶಸ್ತಿ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನಿಂದ ‘ಸಾಧಕರ ಮನೆಗೆ ಸಾಹಿತ್ಯ ಪರಿಷತ್ತು’ ಕಾರ್ಯಕ್ರಮದ ಅಡಿಯಲ್ಲಿ ಕವಾಳೆ ಮನೆಗೆ ತೆರಳಿ ಅವರನ್ನು ಗೌರವಿಸಿ, ಅಭಿನಂದಿಸಲಾಯಿತು.
ಗೌರವ ಸ್ವೀಕರಿಸಿದ ಗಣಪತಿ ಭಾಗ್ವತ ಮಾತನಾಡಿ, ಯಕ್ಷಗಾನ ಅಕಾಡೆಮಿಯಿಂದ ಯಕ್ಷಸಿರಿ ಪ್ರಶಸ್ತಿ ನನಗೆ ಬಂದಿರುವುದು ಕಲಾಮಾತೆಯ ಅನುಗ್ರಹ. ಶ್ರದ್ಧೆ, ಪರಿಶ್ರಮ ಇದ್ದವರಿಗೆ ಮಾತ್ರ ಕಲೆ ಒಲಿಯುತ್ತದೆ. ನಿರಂತರವಾಗಿ ಕಲಾಸೇವೆ, ಯಕ್ಷಗಾನ ಕಲಿಕೆಯನ್ನು ಮುಂದುವರಿಸಿಕೊಂಡು ಹೋಗುವುದಾಗಿ ತಿಳಿಸಿದರು.
ನಿವೃತ್ತ ಪ್ರಾಂಶುಪಾಲ ಬೀರಣ್ಣ ನಾಯಕ ಮೊಗಟಾ ಮಾತನಾಡಿ, ಯಕ್ಷಗಾನ ಅಕಾಡೆಮಿಯಿಂದ ಕವಾಳೆಯರಂತಹ ಅರ್ಹರನ್ನು ಗುರುತಿಸಿ, ಪ್ರಶಸ್ತಿ ನೀಡುತ್ತಿರುವುದು ಸ್ವಾಗತಾರ್ಹ ಎಂದರು.
ಅಧ್ಯಕ್ಷತೆ ವಹಿಸಿದ್ದ ತಾಲೂಕು ಕ.ಸಾ.ಪ ಅಧ್ಯಕ್ಷ ವಿದ್ವಾನ್ ಸುಬ್ರಹ್ಮಣ್ಯ ಭಟ್ಟ ಮಾತನಾಡಿ, 3-4 ದಶಕಗಳಿಂದ ಕಲಾ ಸೇವೆ ಮಾಡುತ್ತಿರುವ ಗಣಪತಿ ಭಾಗ್ವತರಂತಹ ಯೋಗ್ಯರಿಗೆ ಪ್ರಶಸ್ತಿ ನೀಡಿರುವುದು ಪ್ರಶಸ್ತಿಯ ಘನತೆ ಹೆಚ್ಚುವಂತೆ ಮಾಡಿದೆ ಎಂದರು.
ಈ ಸಂದರ್ಭದಲ್ಲಿ ತಾಲೂಕು ಕ.ಸಾ.ಪ ಗೌರವ ಕಾರ್ಯದರ್ಶಿ ಶ್ರೀಧರ ಅಣಲಗಾರ, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಎಸ್.ಭಟ್ಟ ಆನಗೋಡ, ಜಿಲ್ಲಾ ಪತ್ರಕರ್ತರ ಸಂಘದ ಕಾರ್ಯದರ್ಶಿ ನರಸಿಂಹ ಸಾತೊಡ್ಡಿ, ಮಹಮ್ಮದ್ ಶಫಿ, ಕ.ಸಾ.ಪ ಕಾರ್ಯಕಾರಿ ಸಮಿತಿ ಸದಸ್ಯರಾದ ಸುರೇಶ ಬೋರಕರ್, ಜಿ.ಎನ್.ಭಟ್ಟ ತಟ್ಟಿಗದ್ದೆ ಇತರರಿದ್ದರು.