ಯಲ್ಲಾಪುರ ಎಲ್.ಐ.ಸಿ ಶಾಖೆಯಲ್ಲಿ ವಿಮಾ ಸಪ್ತಾಹ

ಯಲ್ಲಾಪುರ: ದೇಶದಲ್ಲಿ ಭಾರತೀಯ ಜೀವ ವಿಮಾ ನಿಗಮ ಭ್ರಷ್ಟಾಚಾರ ರಹಿತವಾಗಿ ಕಾರ್ಯನಿರ್ವಹಿಸುತ್ತಿರುವ ಏಕೈಕ ಸಂಸ್ಥೆ ಎಂದು ನಿವೃತ್ತ ಪ್ರಾಚಾರ್ಯ ಬೀರಣ್ಣ ನಾಯಕ ಮೊಗಟಾ ಹೇಳಿದರು. ಅವರು ಪಟ್ಟಣದ ಭಾರತೀಯ ಜೀವ ವಿಮಾ ಶಾಖೆಯಲ್ಲಿ ವಿಮಾ ಸಪ್ತಾಹವನ್ನು ಉದ್ಘಾಟಿಸಿ ಮಾತನಾಡಿದರು.‌

ಕಳೆದ 66 ವರ್ಷಗಳಲ್ಲಿ ನಿಷ್ಕಳಂಕ ಸಂಸ್ಥೆಯಾಗಿ ದೇಶದ ಪ್ರಗತಿಗೆ ಬಹು ದೊಡ್ಡ ಕೊಡುಗೆ ನೀಡುತ್ತಿದೆ. ಇಂದು ಈ ದೇಶದಲ್ಲಿ ಜನರ ವಿಶ್ವಾಸಾರ್ಹ ಆರ್ಥಿಕ ಸಂಸ್ಥೆಯಾಗಿ, ಜೀವನಾಡಿಯಾಗಿ ಬೆಳೆದುನಿಂತಿದೆ ಎಂದರು. ಈ ವೇಳೆ ಬೀರಣ್ಣ ನಾಯಕ ಮೊಗಟಾ ಅವರನ್ನು ಗೌರವಿಸಲಾಯಿತು.

ಅಧ್ಯಕ್ಷತೆ ವಹಿಸಿದ್ದ ನಿಗಮದ ಶಾಖಾಧಿಕಾರಿ ಗೋಪಾಲಕೃಷ್ಣ ಆಚಾರಿ ಮಾತನಾಡಿ, ಜೀವ ವಿಮಾ ನಿಗಮವನ್ನು ಕೇಂದ್ರ ಸರ್ಕಾರ 5 ಕೋಟಿ ರೂ. ಶೇರು ಬಂಡವಾಳ ನೀಡುವ ಮೂಲಕ ಸ್ಥಾಪಿಸಿತ್ತು. ಈಗ ಕೇಂದ್ರ ಸರ್ಕಾರಕ್ಕೆ ನಿಗಮವೇ 3 ಸಾವಿರ ಕೋಟಿ ಡಿವಿಡೆಂಡ್ ನೀಡುತ್ತಿದೆ. ಗ್ರಾಹಕರು ನೀಡಿದ 90 ರಷ್ಟು ಹಣವನ್ನು ಮರಳಿ ಗ್ರಾಹಕರಿಗೆ ನೀಡಲಾಗುತ್ತಿದ್ದು, ವಿಶ್ವದಲ್ಲಿ ನಿಗಮ 3 ನೇ ಸ್ಥಾನದಲ್ಲಿದೆ ಎಂದರು.

ಉಪ ಆಡಳಿತಾಧಿಕಾರಿ ಡಿ.ಪಿ.ಜೋಗಳೆಕರ್, ಗ್ರಾಹಕರಾದ ದೇವೇಂದ್ರ ಗೌಡ, ಕಚೇರಿಯ ಸಿಬ್ಬಂದಿಗಳಾದ ಸುಧೀಂದ್ರ ಪೈ, ಮೈಕೆಲ್ ಮಿಶ್ರ, ನೀಲವ್ವ, ಅಭಿವೃದ್ಧಿ ಅಧಿಕಾರಿಗಳಾದ ರಾಘವೇಂದ್ರ ಕಣಗಿಲ್, ಮಧುಕೇಶ್ವರ ಹೆಗಡೆ ಇದ್ದರು