ಯಲ್ಲಾಪುರ: ಪಟ್ಟಣದ ದೇವಿ ಮೈದಾನದಲ್ಲಿ 40 ನೇ ವರ್ಷದ ಸಾರ್ವಜನಿಕ ಗಜಾನನೋತ್ಸವ ವಿವಿಧ ಕಾರ್ಯಕ್ರಮಗಳೊಂದಿಗೆ ಸಂಭ್ರಮದಿಂದ ನಡೆಯುತ್ತಿದೆ. ಸತ್ಯಗಣಪತಿ ಕಥೆ, ಗಣಹವನ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ವಿಜ್ರಂಭಣೆಯಿಂದ ನೆರವೇರಿತು. ಪ್ರತಿ ದಿನ ಮಧ್ಯಾಹ್ನ ಅನ್ನ ಸಂತರ್ಪಣೆ ನಡೆಯುತ್ತಿದ್ದು, ನೂರಾರು ಭಕ್ತರು ಪ್ರಸಾದ ಸ್ವೀಕರಿಸುತ್ತಿದ್ದಾರೆ.
ಉತ್ಸವದ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಲಾಗಿದೆ. ಸೆ.3 ಕ್ಕೆ ಸಂಜೆ 7 ಕ್ಕೆ ಭಾಗವತಿಯ ಪ್ರೌಢಶಾಲೆಯ ವಿದ್ಯಾರ್ಥಿಗಳಿಂದ ಡಮಾಮಿ ನೃತ್ಯ ಪ್ರದರ್ಶನ ನಡೆಯಲಿದೆ. ಸೆ.4 ರಂದು ಅಥರ್ವಶೀರ್ಷ ಹವನ ನಡೆಯಲಿದ್ದು, ಅದೇ ಸಂದರ್ಭದಲ್ಲಿ ಉತ್ಸವ ಮೂರ್ತಿ ಹಾಗೂ ಮಂಗಲಮೂರ್ತಿಗೆ ಬಂಗಾರದ ಜನಿವಾರ ಸಮರ್ಪಣೆ ನಡೆಯಲಿದೆ. ಸಂಜೆ 6 ಕ್ಕೆ ಅಢಾವೆ ಪತ್ರಿಕೆ ಲೋಕಾರ್ಪಣೆ ನಡೆಯಕಿದೆ. ನಂತರ ಎದೆ ತುಂಬಿ ಹಾಡುವೆನು ಖ್ಯಾತಿಯ ಅಂಕೋಲಾದ ವರ್ಷಿಣಿ ಶೆಟ್ಟಿ ಹಾಗೂ ದರ್ಶಿನಿ ಶೆಟ್ಟಿ ಅವರ ಸಂಗೀತ ಸಂಜೆ ಕಾರ್ಯಕ್ರಮ ನಡೆಯಲಿದೆ. ಗಣೇಶ ಗುಂಡ್ಕಲ್ ತಬಲಾ, ಶಿವರಾಮ ಭಾಗ್ವತ ಕೀಬೋರ್ಡ್ ಹಾಗೂ ಪ್ರವೀಣ ಇನಾಮದಾರ್ ರಿದಂ ಪ್ಯಾಡ್ ನಲ್ಲಿ ಸಹಕರಿಸಲಿದ್ದಾರೆ.
ಸೆ.5 ರಂದು ಸಂಜೆ 7 ಕ್ಕೆ ಸುಮಾ ತೊಂಡೆಕೆರೆ ತಂಡದವರಿಂದ ಭರತನಾಟ್ಯ ಪ್ರದರ್ಶನ ನಡೆಯಲಿದೆ. ಸೆ.6 ರಂದು ಸಂಜೆ 7 ಕ್ಕೆ ಯುವ ಕಲಾವಿದರಿಂದ ಜಾಂಬವತಿ ಕಲ್ಯಾಣ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಹಿಮ್ಮೇಳದಲ್ಲಿ ಭಾಗವತರಾಗಿ ವಿಘ್ನೇಶ್ವರ ಕುಂಟೆಮನೆ, ಮದ್ದಲೆ ವಾದಕರಾಗಿ ಅನಿರುದ್ಧ ವರ್ಗಾಸರ, ಚಂಡೆ ವಾದಕರಾಗಿ ಪ್ರಶಾಂತ ಕೈಗಡಿ ಭಾಗವಹಿಸಲಿದ್ದಾರೆ. ಮುಮ್ಮೇಳದಲ್ಲಿ ವಿನಯ ಬೇರೊಳ್ಳಿ, ನಾಗರಾಜ ಭಟ್ಟ ಕುಂಕಿಪಾಲ, ನಿರಂಜನ ಜಾಗನಳ್ಳಿ, ದೀಪಕ ಭಟ್ಟ ಕುಂಕಿ, ಶ್ರೀಧರ ಅಣಲಗಾರ ಪಾತ್ರ ನಿರ್ವಹಿಸುವರು.
ಸೆ.7 ರಂದು ಸಂಜೆ 7 ಕ್ಕೆ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿದೆ. ಸೆ.8 ಕ್ಕೆ ಮಧ್ಯಾಹ್ನ 2 ಕ್ಕೆ ಮಹಾಪೂಜೆ, ಭಜನೆ, ಫಲಾವಳಿ ಲೀಲಾವು, 4.30 ಕ್ಕೆ ಮೆರವಣಿಗೆಯೊಂದಿಗೆ ಗಣೇಶ ಮೂರ್ತಿ ವಿಸರ್ಜನೆ ನಡೆಯಲಿದೆ ಎಂದು ಸಮಿತಿಯ ಪ್ರಧಾನ ಕಾರ್ಯದರ್ಶಿ ಸಂಜೀವಕುಮಾರ ಹೊಸ್ಕೇರಿ ತಿಳಿಸಿದ್ದಾರೆ.