ಶಿರಸಿ ಹಲಸು ಮೇಳದಲ್ಲಿ ಖಾದ್ಯಗಳ ಘಮಘಮ ವೈವಿಧ್ಯಮಯ ತಿನಿಸುಗಳ ಅನಾವರಣ

ಶಿರಸಿ:
ಹಲಸಿನ ಸುವಾಸನೆ, ನೂರಾರು ಬಗೆಯ ಸಾಂಪ್ರದಾಯಿಕ ಹಾಗೂ ನವೀನ ಖಾದ್ಯಗಳ ಸೊಗಡು, ಹಲಸಿನ ತಳಿ ವೈವಿಧ್ಯದ ಅನಾವರಣ, ರೈತರು ಹಾಗೂ ಮಹಿಳಾ ಸ್ವಸಹಾಯ ಸಂಘಗಳ ಉತ್ಸಾಹಭರಿತ ಭಾಗವಹಿಸುವಿಕೆಯಿಂದ ನಗರದ ಕದಂಬ ಸಂಸ್ಥೆ ಆವರಣದಲ್ಲಿ ಶನಿವಾರ ಆರಂಭವಾದ 13ನೇ ಎರಡು ದಿನಗಳ ಹಲಸು ಮೇಳಕ್ಕೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.


ಕದಂಬ ಮಾರ್ಕೆಟಿಂಗ್ ಸೌಹಾರ್ದ ಸಹಕಾರಿ, ಜಿಲ್ಲಾ ಸಾವಯವ ಒಕ್ಕೂಟ, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ, ಜೀವ ವೈವಿಧ್ಯ ಮಂಡಳಿ, ತೋಟಗಾರಿಕಾ ಇಲಾಖೆ, ಕೃಷಿ ಇಲಾಖೆ, ಅರಣ್ಯ ಇಲಾಖೆ ಹಾಗೂ ವನಶ್ರೀ ಸಂಸ್ಥೆಯ ಸಹಯೋಗದಲ್ಲಿ ಆಯೋಜಿಸಿರುವ ಮೇಳದಲ್ಲಿ 200ಕ್ಕೂ ಅಧಿಕ ಹಲಸಿನ ಖಾದ್ಯಗಳು, ಮೌಲ್ಯವರ್ಧಿತ ಉತ್ಪನ್ನಗಳು, ಹಲಸಿನ ತಳಿ ವೈವಿಧ್ಯ, ಬೀಜ, ಸಸಿ ಹಾಗೂ ಕೃಷಿ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ.


ಮೇಳದಲ್ಲಿ ಹಲಸಿನ ಬೀಜದ ಸಲಾಡ್, ಹಲಸಿನ ಬೀಜದ ಹಲ್ವಾ, ಹಲಸಿನ ಬೇಳೆ ಖಾರದ ಕಡ್ಡಿ, ಹಲಸಿನ ಬೇಳೆ ಚಟ್ನಿ, ಹಲಸಿನ ಬೇಳೆಯ ಅತ್ರಾಸ್, ಹಲಸಿನ ಕಾಯಿ ಬೆಣ್ಣೆ ಮುರುಕು, ಚಟ್ ಪಟ್ ಸೀಡ್ಸ್, ಹಲಸಿನ ಕಾಯಿ ಹಾಲ್ಕೋವಾ, ಹಲಸಿನ ಕಾಯಿ ಮದ್ದೂರು ವಡೆ, ಹಲಸಿನ ಕಾಯಿ ಸೊಳೆಯ ಬಾಳಕಾ, ಹಲಸಿನ ಮಿಕ್ಸ್ ಹಲ್ವಾ, ಕಳಚೆ ಪೊಲಡ್ಜಾ, ಹಲಸಿನ ಕಾಯಿ ಚೌಚೌ, ಹಲಸಿನ ಹಣ್ಣಿನ ಶಂಕರ ಪೊಳೆ, ಹಲಸಿನ ಹಣ್ಣಿನ ಚುರುಮೂರೆ, ಹಲಸಿನ ಹಣ್ಣಿನ ಬರ್ಫಿ, ಹಲಸಿನ ಕಾಯಿ ಚಿಪ್ಸ್, ಹಲಸಿನ ಕಾಯಿ ಕಳಚೆ ಹುಳಿ, ಬಕ್ಕೆ ಹಣ್ಣಿನ ಅತ್ರಾಸ್, ಮುದ್ದೆ ಕಡಬು, ಹಲಸಿನ ಹಣ್ಣಿನ ಹಲ್ವಾ, ಹಲಸಿನ ಬೀಜದ ಹಣ್ಣಿನ ವಡೆ, ಹಲಸಿನ ಬೀಜದ ಲಾಡು, ಹಲಸಿನ ಹಣ್ಣಿನ ಸ್ವೀಟ್ ರೋಲ್, ಸಂಧ್ಯಾವನೆ, ಹಲಸಿನ ಹಣ್ಣಿನ ಜಾನ್ ಸಕ್ಕರೆ, ಬಕ್ಕೆ ಹಣ್ಣಿನ ಕೇಕ್, ಎಳೆ ಹಲಸಿನ ಕಾಯಿ ಮಂಚೂರಿಯನ್, ಹಲಸಿನ ಜೇನು ಕೋಲು, ಖಾರಾ ಬುಂದಿ, ಹಲಸಿನ ಶ್ರೀಖಂಡ, ಹಲಸಿನ ಡ್ರೈ ಮಿಸಾಲ್, ಹಲಸಿನ ಪಕೋಡಾ, ಹಲಸಿನ ಬೇಳೆ ಲಾಡು, ಹಲಸಿನ ಪುಡಿ ಮಸಾಲ ಮಿಕ್ಸ್, ಹಲಸಿನ ಬೇಳೆಯ ರಿಬ್ಬನ್ ಕಟ್, ಬಕ್ಕೆ ಹಣ್ಣಿನ ಹೋಳಿಗೆ, ಹಲಸಿನ ಕಾಯಿ ಕಬಾಬ್, ಹಲಸಿನ ಬೀಜದ ಸೂಪ್, ಹಲಸಿನ ಹಣ್ಣಿನ ರೊಟ್ಟಿ, ಹಲಸಿನ ಹಪ್ಪಳ, ಮಣ್ಣಿ ಹಲ್ವಾ, ಹಲಸಿನ ಬೀಜದ ಕಟ್ಲೇಟ್ ಸೇರಿದಂತೆ 200ಕ್ಕೂ ಅಧಿಕ ವೈವಿಧ್ಯಮಯ ಖಾದ್ಯಗಳು ಆಹಾರಪ್ರಿಯರ ಮೆಚ್ಚುಗೆಗೆ ಪಾತ್ರವಾಗಿವೆ.
ಜತೆಗೆ ವಿವಿಧ ಬಗೆಯ ಹಲಸಿನ ತಳಿಗಳು, ಸಂಸ್ಕರಿತ ಆಹಾರ ಉತ್ಪನ್ನಗಳು ಹಾಗೂ ಹಲಸಿನ ಮೌಲ್ಯವರ್ಧನೆಯ ಸಾಧ್ಯತೆಗಳನ್ನು ಪರಿಚಯಿಸುವ ಪ್ರದರ್ಶನಕ್ಕೂ ಉತ್ತಮ ಸ್ಪಂದನೆ ವ್ಯಕ್ತವಾಯಿತು. ಅಶೀಸರದ ಅರುಣಾ ಹೆಗಡೆ ತಯಾರಿಸಿರುವ ಅಡಿಕೆ ಸೇರಿಸದ ಹಲಸಿನ ಸೊಳೆಯ ಪುಡಿ ಸೇರಿದಂತೆ ಹಲವು ನೂತನ ಉತ್ಪನ್ನಗಳು ವಿಶೇಷವಾಗಿ ಎಲ್ಲರ ಗಮನ ಸೆಳೆದವು.

ಮೇಳದಲ್ಲಿ ಸೆಲ್ಫಿ ಪಾಯಿಂಟ್, ಹಲಸಿನ ಬೀಜ, ಸಸಿಗಳು ಹಾಗೂ ವಿವಿಧ ಗಿಡಗಳ ಮಾರಾಟ, ಕೃಷಿ ಮತ್ತು ಸಾವಯವ ಉತ್ಪನ್ನಗಳ ಪ್ರದರ್ಶನಕ್ಕೆ ಜನರು ಹೆಚ್ಚಿನ ಆಸಕ್ತಿ ತೋರಿದರು. ಸೆಲ್ಕೊ ಸಂಸ್ಥೆಯ ಗ್ರಾಮೀಣ ಬಳಕೆಯ ನವೀನ ಉತ್ಪನ್ನಗಳ ಪ್ರದರ್ಶನಕ್ಕೂ ಉತ್ತಮ ಪ್ರತಿಕ್ರಿಯೆ ದೊರೆಯಿತು.
ಸುಮಾರು 150ಕ್ಕೂ ಅಧಿಕ ಮಹಿಳೆಯರು ತಾವು ತಯಾರಿಸಿದ ಹಲಸಿನ ಮೌಲ್ಯವರ್ಧಿತ ಆಹಾರ ಉತ್ಪನ್ನಗಳನ್ನು ಪ್ರದರ್ಶಿಸಿ ಮಾರಾಟ ನಡೆಸುತ್ತಿದ್ದು, ಗ್ರಾಮೀಣ ಮಹಿಳೆಯರ ಸ್ವಾವಲಂಬನೆಯ ಚಿತ್ರಣ ಮೇಳದಲ್ಲಿ ಅನಾವರಣಗೊಂಡಿದೆ.

ಕಾರ್ಯಕ್ರಮಕ್ಕೆ ಶಾಸಕ ಭೀಮಣ್ಣ ಟಿ. ನಾಯ್ಕ ಚಾಲನೆ ನೀಡಿದರು. ಇದೇ ವೇಳೆ ಹಲಸಿನ ಮೌಲ್ಯವರ್ಧಿತ ಉತ್ಪನ್ನಗಳ ಆನ್‌ಲೈನ್ ವೆಬ್‌ಸೈಟ್‌ ಬಿಡುಗಡೆಗೊಳಿಸಲಾಯಿತು. ಕಾರ್ಯಕ್ರಮದಲ್ಲಿ ಅನಂತ ಅಶೀಸರ, ತಂಜಾವೂರಿನ ಡಾ. ಷಣ್ಮುಗ ಸುಂದರಂ, ಡಾ. ಚಿದಾನಂದ ಜಿ.ವಿ., ಡಾ. ಸತೀಶ ಬಿ.ಪಿ., ಶೈಲಜಾ ಗೋರ್ನಮನಿ, ರಾಜೇಂದ್ರ ಜೋಶಿ, ವಿಶ್ವೇಶ್ವರ ಭಟ್ಟ ಕೋಟೆಮನೆ, ವಿಶ್ವನಾಥ ಅರಬಗೋಡು, ಸುದರ್ಶನ, ಮಮತಾ ಭಟ್ಟ, ಇಂದಿರಾ ಹೆಗಡೆ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಕದಂಬ ಸಂಸ್ಥೆಯ ಅಧ್ಯಕ್ಷ ಶಂಭುಲಿಂಗ ಹೆಗಡೆ ಅಧ್ಯಕ್ಷತೆ ವಹಿಸಿದ್ದರು. ವಿಶ್ವೇಶ್ವರ ಭಟ್ಟ ಕೋಟೆಮನೆ ಹಾಗೂ ನರೇಂದ್ರ ಹೊಂಡಗಾಶಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜೇಂದ್ರ ಜೋಶಿ ಸ್ವಾಗತಿಸಿದರು. ನೆಲಸಿರಿ ವಿವೇಕ ಹೆಗಡೆ ಕಾರ್ಯಕ್ರಮ ನಿರ್ವಹಿಸಿದರು.

145ಕ್ಕೂ ಅಧಿಕ ಮಹಿಳೆಯರಿಗೆ ಜೀವನೋಪಾಯ

“ಇದು ಕೇವಲ ಮೇಳದಿಂದ ಮೇಳಕ್ಕೆ ಸೀಮಿತವಾಗುವ ಕಾರ್ಯಕ್ರಮವಲ್ಲ. ಮೇಳದಿಂದ ಬದುಕು ಕಟ್ಟಿಕೊಳ್ಳುವ ಅನೇಕ ಕುಟುಂಬಗಳಿಗೆ ಇದು ಆಶಾಕಿರಣವಾಗಿದೆ. ಈಗಾಗಲೇ 145ಕ್ಕೂ ಅಧಿಕ ಮಹಿಳೆಯರು ಕದಂಬ ಸಂಸ್ಥೆಯ ಮೂಲಕ ಹಲಸಿನ ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸಿ ಜೀವನೋಪಾಯ ಕಂಡುಕೊಂಡಿದ್ದಾರೆ. ಹಲಸು ಮೇಳವು ಗ್ರಾಮೀಣ ಆರ್ಥಿಕತೆಗೆ ಹೊಸ ಬಲ ತುಂಬುತ್ತಿದೆ.” — ವಿಶ್ವೇಶ್ವರ ಭಟ್ಟ ಕೋಟೆಮನೆ, ಸಂಚಾಲಕ

‘ಹಲಸು ಮಂಡಳಿ ರಚನೆಯಾಗಲಿ’

“ಕೇವಲ ಹಲಸು ಮೇಳವಲ್ಲ, ಇದು ಹಸಿರು ಉತ್ಸವವಾಗಿದೆ. ಹಲಸಿನ ಬೆಳೆ, ಸಂಸ್ಕರಣೆ ಹಾಗೂ ಮಾರುಕಟ್ಟೆ ಅಭಿವೃದ್ಧಿಗೆ ರಾಜ್ಯ ಸರ್ಕಾರ ಪ್ರತ್ಯೇಕ ಹಲಸು ಮಂಡಳಿ ರಚಿಸಬೇಕು.” – ಅನಂತ ಅಶೀಸರ, ಮಾಜಿ ಅಧ್ಯಕ್ಷ, ಜೀವ ವೈವಿಧ್ಯ

ಹಲಸು ಮೂಲ ಆಹಾರದಲ್ಲಿ ಸೇರಿಲಿ

ಅಡಿಕೆ ಬೆಳೆಗಾರರು ಕಷ್ಟದಲ್ಲಿ ಇದ್ದಾರೆ. ಅವರಿಗೆ ಹಲಸು ಒಂದ ಒಳ್ಳೆ ಆರ್ಥಿಕ ಶಕ್ತಿ ಕೊಡುತ್ತದೆ. ಕದಂಬ ಸಂಸ್ಥೆ ರೈತರಿಗೆ ಆರ್ಥಿಕ ಚೈತನ್ಯ ನೀಡಿ ಮುನ್ನಡೆಸುತ್ತಿದೆ. ಗ್ರಾಮ್ ಲೆಕ್ಕದಲ್ಲೂ ಕದಂಬ ಖರೀದಿಸುತ್ತಿದೆ ಎಂಬುದು ನಮ್ಮ ಹೆಮ್ಮೆ‌. ಇನ್ನು ಹಲಸು ದಿನ‌ಬಳಕೆ ಆಹಾರವಾಗಿ ಮೂಲ ಆಹಾರವಾಗಿ ಸೇರಲಿ. ಹಲಸು‌ ಮಂಡಳಿ ಸ್ಥಾಪಿಸಲು ಪ್ರಯತ್ನಿಸುವೆ. ಬೆಟ್ಟದ ಹಕ್ಕು ಬಿಟ್ಟುಕೊಡುವ ಪ್ರಶ್ನೆ ಇಲ್ಲ. ಬೆಟ್ಟದಲ್ಲಿ ಹಣ್ಣಿನ‌ ಗಿಡ ಬೆಳಸಿ.
-ಭೀಮಣ್ಣ ನಾಯ್ಕ, ಶಾಸಕ