ಸಿದ್ದಾಪುರ ಫೆ.03 : ಪ್ರಖ್ಯಾತ ಸ್ವಾಮೀಜಿಯೊಂದಿಗಿನ ಅಕ್ರಮ ಸಂಬಂಧದ ವಿಚಾರವು ಭೀಕರ ಹತ್ಯೆಗೆ ಕಾರಣವಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಅವರಗುಪ್ಪಾ ಗ್ರಾಮದಲ್ಲಿ ನಡೆದಿದೆ.

ಮಗಳ ರಕ್ಷಣೆಗೆ ಮುಂದಾದ ವಸಂತ ಜಟ್ಯಾ ನಾಯ್ಕ್ (41) ಎಂಬವರು ಆರೋಪಿಗಳ ಚಾಕು ಇರಿತದಿಂದ ದಾರುಣವಾಗಿ ಸಾವನ್ನಪ್ಪಿದ್ದಾರೆ. ಈ ಘಟನೆಯಲ್ಲಿ ಮಹೇಶ್ ಜಟ್ಯಾ ನಾಯ್ಕ್ (37) ಹಾಗೂ ನೆರೆಮನೆಯ ಕುಮಾರ್ ನಾಯ್ಕ್ (35) ಗಂಭೀರವಾಗಿ ಗಾಯಗೊಂಡು ಶಿವಮೊಗ್ಗ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದಾರೆ. ಪೊಲೀಸರ ಪ್ರಕಾರ, ಸುಚಿತ್ರಾ ನಾಯ್ಕ್ ಎಂಬ ಮಹಿಳೆ ಕಳೆದ ಆರು ತಿಂಗಳಿಂದ ಕಮಲಾಕರ ಸ್ವಾಮಿ ಎಂಬ ವ್ಯಕ್ತಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳು. ತಾಯಿಯ ವರ್ತನೆಯಿಂದ ಬೇಸತ್ತ ಮಗಳು ತಂದೆಗೆ ಮೊಬೈಲ್ ಸಂದೇಶ ಕಳುಹಿಸಿ “ನಮ್ಮನ್ನು ರಕ್ಷಿಸಿ” ಎಂದು ಮನವಿ ಮಾಡಿಕೊಂಡಿದ್ದಾಳೆ.
ಮಗಳು ಮನೆಗೆ ಬಂದ ಬಳಿಕ ಕುಟುಂಬಸ್ಥರು ವಿಚಾರಣೆ ನಡೆಸುತ್ತಿದ್ದ ವೇಳೆ, ರಾತ್ರಿ 9.45ರ ಸುಮಾರಿಗೆ ಸುಚಿತ್ರಾ ನಾಯ್ಕ್, ಆಕೆಯ ತಂದೆ ಲೋಕನಾಥ ನಾಯ್ಕ್, ಕಮಲಾಕರ ಸ್ವಾಮಿ ಹಾಗೂ ಇನ್ನಿತರ ನಾಲ್ವರು ಅಪರಿಚಿತರು ಮನೆಗೆ ದಾಳಿ ನಡೆಸಿದ್ದಾರೆ. ವಿವಾದ ತೀವ್ರಗೊಂಡು ಚಾಕು ಇರಿತ ನಡೆದಿದ್ದು, ವಸಂತ ನಾಯ್ಕ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮಹೇಶ್ ನಾಯ್ಕ್ ಹಾಗೂ ಕುಮಾರ್ ನಾಯ್ಕ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಚಿತ್ರಾ ನಾಯ್ಕ್, ಲೋಕನಾಥ ನಾಯ್ಕ್, ಕಮಲಾಕರ ಸ್ವಾಮಿ ಸೇರಿದಂತೆ ಒಟ್ಟು ಏಳು ಮಂದಿಯನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಭೀಕರ ಘಟನೆಯಿಂದ ಗ್ರಾಮದಲ್ಲಿ ಭೀತಿ ಹಾಗೂ ಆಕ್ರೋಶದ ವಾತಾವರಣ ನಿರ್ಮಾಣವಾಗಿದೆ.
