ನರ್ಸಿಂಗ್ ವಿದ್ಯಾರ್ಥಿನಿಗೆ ಮದುವೆ ಆಮಿಷವಿಟ್ಟು ಲೈಂಗಿಕ ದೌರ್ಜನ್ಯ ಎಸಗಿದ ಸರ್ಕಾರಿ ವೈದ್ಯ

ಲಕ್ನೋ: ಸರ್ಕಾರಿ ವೈದ್ಯಕೀಯ ಸಂಸ್ಥೆಯ ಇಂಟರ್ನ್ ವೈದ್ಯರೊಬ್ಬರು, ಮದುವೆಯಾಗುವುದಾಗಿ ಸುಳ್ಳು ಭರವಸೆ ನೀಡಿ ನರ್ಸಿಂಗ್ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ವಿದ್ಯಾರ್ಥಿನಿಯ ಖಾಸಗಿ ಫೋಟೋಗಳನ್ನು ಬಹಿರಂಗಪಡಿಸುವುದಾಗಿ ವೈದ್ಯ ಬೆದರಿಕೆ ಹಾಕಿದ ಆರೋಪದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಉಪ ಪೊಲೀಸ್ ಆಯುಕ್ತ ವಿಶ್ವಜೀತ್ ಶ್ರೀವಾಸ್ತವ ಅವರು, ಇಂಟರ್ನ್ ವೈದ್ಯನ ಹಿನ್ನೆಲೆ ಮತ್ತು ವಿಳಾಸಗಳನ್ನು ಪರಿಶೀಲಿಸಲಾಗುತ್ತಿದೆ. ಆರೋಪಿಯನ್ನು ಪತ್ತೆಹಚ್ಚಲು ಪ್ರಯತ್ನಗಳು ನಡೆಯುತ್ತಿವೆ. ನರ್ಸಿಂಗ್ ವಿದ್ಯಾರ್ಥಿನಿಯ ಹೇಳಿಕೆಯನ್ನು ಮ್ಯಾಜಿಸ್ಟ್ರೇಟ್ ಮುಂದೆ ದಾಖಲಿಸಲಾಗುವುದು ಎಂದು ತಿಳಿಸಿದ್ದಾರೆ. 

ಮದುವೆಯಾಗುವುದಾಗಿ ನಂಬಿಸಿ ಆರೋಪಿಯು ನನ್ನ ಜೊತೆ ಹಲವು ಬಾರಿ ದೈಹಿಕ ಸಂಬಂಧ ಹೊಂದಿದ್ದ ಎಂದು ನರ್ಸಿಂಗ್ ವಿದ್ಯಾರ್ಥಿನಿ ನೀಡಿದ ದೂರಿನ ಮೇರೆಗೆ ಕಿಯಾಸರ್‌ಬಾಗ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಮದುವೆಯಾಗುವಂತೆ ಒತ್ತಾಯಿಸಿದಾಗ ಆರೋಪಿ ನಿರಾಕರಿಸಿದ್ದಾನೆ. ಅಲ್ಲದೇ, ಆಕೆಯ ಖಾಸಗಿ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಕಳೆದ ಹದಿನೈದು ದಿನಗಳಲ್ಲಿ ಸಂಸ್ಥೆಯಲ್ಲಿ ವರದಿಯಾದ ಎರಡನೇ ಪ್ರಕರಣ ಇದು. ಇದಕ್ಕೂ ಮೊದಲು, ಪಶ್ಚಿಮ ಬಂಗಾಳದ ವೈದ್ಯರೊಬ್ಬರು ಸಹ ವೈದ್ಯನ ವಿರುದ್ಧ ದೂರು ದಾಖಲಿಸಿದ್ದರು. ವೈದ್ಯನ ವಿರುದ್ಧ ಲವ್‌ ಜಿಹಾದ್‌ ಆರೋಪ ಮಾಡಿದ್ದರು. ಧರ್ಮಕ್ಕೆ ಮತಾಂತರ ಆಗುವಂತೆ ಒತ್ತಾಯಿಸಿದ್ದ ಎಂದು ದೂರು ನೀಡಲಾಗಿತ್ತು. ಆ ಪ್ರಕರಣದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಂತ್ರಸ್ತೆಯೊಂದಿಗೆ ಮಾತನಾಡಿದ್ದಾರೆ. ಆದರೆ, ಆರೋಪಿ ಇನ್ನೂ ತಲೆಮರೆಸಿಕೊಂಡಿದ್ದಾನೆ.