ಹೊನ್ನಾವರ : ಪಟ್ಟಣದ ಬಸ್ ನಿಲ್ದಾಣದ ಸುತ್ತಮುತ್ತ ರಾಷ್ಟ್ರ ಸೇವಿಕಾ ಸಮಿತಿ ಹೊನ್ನಾವರದ ಆಶ್ರಯದಲ್ಲಿ ಸ್ಥಳೀಯ ಮಹಿಳೆಯರು ಒಗ್ಗಟ್ಟಾಗಿ ಸೇರಿ, ಸಾರ್ವಜನಿಕ ಸ್ವಚ್ಚತೆ ಹಾಗೂ ಪರಿಸರ ಸಂರಕ್ಷಣೆ ಕುರಿತು ಜನಜಾಗೃತಿ ಮೂಡಿಸುವ ಉದ್ದೇಶದಿಂದ ಒಂದು ಸಪ್ತಾಹ ಸ್ವಚ್ಚತಾ ಅಭಿಯಾನವನ್ನು ಹಮ್ಮಿಕೊಂಡಿದ್ದಾರೆ. ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತರಲು ಮಹಿಳಾ ಶಕ್ತಿ ಪ್ರಮುಖ ಪಾತ್ರ ವಹಿಸಬಲ್ಲದು ಎಂಬ ನಂಬಿಕೆಯಿಂದ, ಈ ಕಾರ್ಯಕ್ರಮವನ್ನು ಆಯೋಜಿಸಿ ಕಾರ್ಯರೂಪಕ್ಕೆ ತರಲಾಗಿದೆ.

ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಚತೆ ಕಾಪಾಡುವುದು ಕೇವಲ ಆಡಳಿತದ ಹೊಣೆಗಾರಿಕೆ ಅಲ್ಲ, ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯೂ ಹೌದು ಎಂಬ ಸಂದೇಶವನ್ನು ಜನರಿಗೆ ತಲುಪಿಸುವ ಸಲುವಾಗಿ, ಕಸ ನಿರ್ವಹಣೆ, ಪರಿಸರ ಸಂರಕ್ಷಣೆ ಹಾಗೂ ಸಾರ್ವಜನಿಕ ಶಿಸ್ತು ಕುರಿತು ಮಾಹಿತಿ ಒಳಗೊಂಡ ನಾಗರೀಕ ಕರ್ತವ್ಯ ಎಂಬ ಬಿತ್ತಿಪತ್ರಗಳನ್ನು ಅಳವಡಿಸಲಾಗಿದೆ. ಮಹಿಳೆಯರ ಸಕ್ರಿಯ ಭಾಗವಹಿಸುವಿಕೆಯಿಂದ ಈ ಅಭಿಯಾನಕ್ಕೆ ವಿಶೇಷ ಮಹತ್ವ ದೊರೆತಿದ್ದು, ಸ್ವಚ್ಚತೆ ಎಂಬುದು ಸಂಸ್ಕಾರ ಹಾಗೂ ಸಂವೇದನೆಯ ಪ್ರತೀಕ ಎಂಬ ವಿಚಾರವನ್ನು ಸಮಾಜದ ಮುಂದೆ ಪರಿಣಾಮಕಾರಿಯಾಗಿ ಪ್ರತಿಪಾದಿಸಲಾಗಿದೆ.

ಸ್ವಚ್ಚ, ಸುಂದರ ಮತ್ತು ಆರೋಗ್ಯಕರ ಹೊನ್ನಾವರ ನಿರ್ಮಾಣವೇ ಈ ಅಭಿಯಾನದ ಮುಖ್ಯ ಗುರಿಯಾಗಿದ್ದು, ಮುಂದಿನ ದಿನಗಳಲ್ಲಿಯೂ ಮಹಿಳಾ ಶಕ್ತಿಯ ಮೂಲಕ ಸಮಾಜಮುಖಿ ಕಾರ್ಯಕ್ರಮಗಳನ್ನು ನಿರಂತರವಾಗಿ ಕೈಗೊಳ್ಳುವ ಸಂಕಲ್ಪವನ್ನು ಸಂಘಟನೆ ಹೊಂದಿದೆ.
ಈ ರೀತಿಯ ಸಾಮಾಜಿಕ ಸೇವೆಯಲ್ಲಿ ಆಸಕ್ತಿ ಹೊಂದಿರೋ ಮಾತೆಯರು ಹಾಗೂ ತರುಣಿಯರು ಈ ಕೆಳಕಂಡ ದೂರವಾಣಿ ಸಂಖ್ಯೆಗಳನ್ನ ಸಂಪರ್ಕಿಸಿ: 94811 36336, 7829210359, 9663707017, 8073699673
