ದೇಶದಲ್ಲಿ ತೀವ್ರ ಚಳಿಗಾಳಿ, ಮಂಜು ಮತ್ತು ಮಳೆಯ ಎಚ್ಚರಿಕೆಯನ್ನು ಭಾರತ ಹವಾಮಾನ ಇಲಾಖೆ (ಐಎಂಡಿ) ಎಚ್ಚರಿಕೆ ನೀಡಿದೆ. ಮುಂದಿನ ನಾಲ್ಕು ದಿನಗಳಲ್ಲಿ ಗುಡುಗು ಸಹಿತ ಭಾರೀ ಮಳೆ, ಗುಡ್ಡಗಾಡು ಪ್ರದೇಶಗಳಲ್ಲಿ ಹಿಮಪಾತ ಮತ್ತು ಉತ್ತರ ರಾಜ್ಯಗಳಲ್ಲಿ ದಟ್ಟವಾದ ಮಂಜು ಮುನ್ಸೂಚನೆ ನೀಡಿದೆ.

ದೆಹಲಿ, ಉತ್ತರ ಪ್ರದೇಶ, ಹರಿಯಾಣ, ಪಂಜಾಬ್, ಬಿಹಾರ ಸೇರಿದಂತೆ ಉತ್ತರ ಭಾರತದಲ್ಲಿ ಶೀತಗಾಳಿ ತೀವ್ರಗೊಂಡಿದ್ದು, ಗೋಚರತೆ ಕಡಿಮೆಯಾಗಿ ಸಾಮಾನ್ಯ ಜೀವನ ಅಸ್ತವ್ಯಸ್ತವಾಗಿದೆ. ದೆಹಲಿ ವಿಮಾನ ನಿಲ್ದಾಣದಲ್ಲಿ ದಟ್ಟ ಮಂಜಿನಿಂದಾಗಿ ಶನಿವಾರ 129 ವಿಮಾನಗಳು ರದ್ದಾಗಿವೆ. ಜೊತೆಗೆ ದೆಹಲಿಯಲ್ಲಿ ಗಾಲಿ ಗುಣಮಟ್ಟ ಭಾರೀ ಕುಸಿದಿದ್ದು, ಜನರು ಉಸಿರಾಡುವುದಕ್ಕೂ ಕಷ್ಟಪಡುವಂತಾಗಿದೆ.
ಉತ್ತರ ಭಾರತದಲ್ಲಿ ದಟ್ಟ ಮಂಜು ಮತ್ತು ಶೀತ ಅಲೆಯು ಮುಂದುವರಿದಿದ್ದು, ಡಿಸೆಂಬರ್ 24ರವರೆಗೆ ಉತ್ತರಾಖಂಡ, ಉತ್ತರ ಪ್ರದೇಶ ಮತ್ತು ಹರಿಯಾಣದಲ್ಲಿ ರಾತ್ರಿ-ಬೆಳಗ್ಗೆ ದಟ್ಟ ಮಂಜು ಬೀಳುವ ನಿರೀಕ್ಷೆಯಿದೆ. ಪಂಜಾಬ್, ಬಿಹಾರ, ಜಾರ್ಖಂಡ್, ಮಧ್ಯಪ್ರದೇಶ, ಛತ್ತೀಸ್‌ಗಢ, ಒಡಿಶಾ, ಪಶ್ಚಿಮ ಬಂಗಾಳ, ಸಿಕ್ಕಿಂ ಮತ್ತು ಈಶಾನ್ಯ ರಾಜ್ಯಗಳಲ್ಲಿ ಚದುರಿದ ಮಂಜು ಬೀಳಬಹುದು.

ಡಿಸೆಂಬರ್ 21 ಮತ್ತು 22ರಂದು ಮಧ್ಯ ಮಹಾರಾಷ್ಟ್ರ ಮತ್ತು ದಕ್ಷಿಣ ಒಳನಾಡು ಕರ್ನಾಟಕದಲ್ಲಿ, 23ರಂದು ಉತ್ತರ ಒಳನಾಡು ಕರ್ನಾಟಕದಲ್ಲಿ ಮತ್ತು 21-23ರ ನಡುವೆ ತೆಲಂಗಾಣದಲ್ಲಿ ಶೀತಗಾಳಿ ಬೀಸುವ ಸಾಧ್ಯತೆಯಿದೆ. ಹೀಗಾಗಿ ಹವಾಮಾನ ಇಲಾಖೆ ದೇಶದ ಜನರಿಗೆ ಭಾರೀ ಎಚ್ಚರಿಕೆ ನೀಡಿದ್ದು, ಈ ತೀವ್ರಚಳಿಗಾಳಿಗೆ ಜನರು ಥಂಡಾ ಹೊಡೆದಿದ್ದಾರೆ.
ಗುಡ್ಡಗಾಡು ಪ್ರದೇಶಗಳಲ್ಲಿ ಮಳೆ ಮತ್ತು ಹಿಮಪಾತ: ಮುಂದಿನ ಮೂರು ದಿನಗಳಲ್ಲಿ ಜಮ್ಮು-ಕಾಶ್ಮೀರ, ಲಡಾಖ್, ಗಿಲ್ಗಿಟ್-ಬಾಲ್ಟಿಸ್ತಾನ್ ಮತ್ತು ಮುಜಫರಾಬಾದ್‌ನಲ್ಲಿ ಚದುರಿದ ಮಳೆ ಅಥವಾ ಮಧ್ಯಮ ಮಳೆಯಾಗುವ ನಿರೀಕ್ಷೆಯಿದೆ. ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ಮಳೆ ಅಥವಾ ಹಿಮಪಾತ ಸಾಧ್ಯತೆಯಿದೆ. ಡಿಸೆಂಬರ್ 21ರಂದು ಜಮ್ಮು-ಕಾಶ್ಮೀರ ಮತ್ತು ಲಡಾಖ್‌ನಲ್ಲಿ ಭಾರೀ ಮಳೆ ಅಥವಾ ಹಿಮಪಾತವಾಗಬಹುದು. ಈ ಪ್ರದೇಶಗಳಲ್ಲಿ ರಸ್ತೆಗಳು ಜಾರುವ ಸಾಧ್ಯತೆಯಿದ್ದು, ಪ್ರಯಾಣಿಕರು ಮುನ್ನೆಚ್ಚರಿಕೆ ವಹಿಸಬೇಕು.
ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡಕ್ಕೆ ನಾಲ್ಕು ದಿನಗಳ ಎಚ್ಚರಿಕೆ ನೀಡಲಾಗಿದೆ. ಹಿಮಾಚಲದಲ್ಲಿ ನಿರಂತರ ಹಿಮಪಾತದಿಂದ ತೊಂದರೆಯಾಗಿದ್ದು, ಉತ್ತರಾಖಂಡದಲ್ಲಿ ತೀವ್ರ ಚಳಿ ಮುಂದುವರಿದಿದೆ. ಜನರು ಉಷ್ಣತೆಗಾಗಿ ದೀಪೋತ್ಸವ ಅವಲಂಬಿಸಿದ್ದಾರೆ.
ದಕ್ಷಿಣ ರಾಜ್ಯಗಳಲ್ಲಿ ಭಾರೀ ಮಳೆ: ಕೇರಳ, ತಮಿಳುನಾಡು, ಕರ್ನಾಟಕ ಮತ್ತು ಪಂಜಾಬ್‌ಗೆ ಭಾರೀ ಮಳೆ ಎಚ್ಚರಿಕೆ ನೀಡಲಾಗಿದೆ. ಮುಂದಿನ ನಾಲ್ಕು ದಿನಗಳಲ್ಲಿ ಕಾರೈಕಲ್, ಮಾಹೆ, ಪುದುಚೇರಿ ಮತ್ತು ಅಂಡಮಾನ್-ನಿಕೋಬಾರ್ ದ್ವೀಪಗಳಲ್ಲಿ ಭಾರೀ ಮಳೆಯಾಗಬಹುದು. ಕೇರಳದಲ್ಲಿ ಮಳೆ ಕಡಿಮೆಯಾಗುತ್ತಿದ್ದರೂ, ಗುಡ್ಡಗಾಡು ಪ್ರದೇಶಗಳಲ್ಲಿ ಶೀತ ಮುಂದುವರಿದಿದೆ. ಇಡುಕ್ಕಿ ಜಿಲ್ಲೆಯ ಮುನ್ನಾರ್‌ನಲ್ಲಿ ತಾಪಮಾನ ಶೂನ್ಯ ಡಿಗ್ರಿಗಿಂತ ಕಡಿಮೆಯಾಗಿದೆ.
ಮುಂದಿನ ಮೂರು ದಿನಗಳಲ್ಲಿ ವಾಯುವ್ಯ ಭಾರತದಲ್ಲಿ ಕನಿಷ್ಠ ತಾಪಮಾನ 2-3 ಡಿಗ್ರಿ ಏರಿಕೆಯಾಗಿ ನಂತರ 2-4 ಡಿಗ್ರಿ ಇಳಿಯಬಹುದು. ಮಹಾರಾಷ್ಟ್ರ, ಮಧ್ಯ ಭಾರತ ಮತ್ತು ಈಶಾನ್ಯ ಭಾರತದಲ್ಲಿ ಗಮನಾರ್ಹ ಬದಲಾವಣೆಯಿಲ್ಲ. ಈ ಹವಾಮಾನ ಪರಿಸ್ಥಿತಿಗಳು ಸಾಮಾನ್ಯ ಜೀವನ, ಸಾರಿಗೆ ಮತ್ತು ವಿಮಾನ ಸೇವೆಗಳ ಮೇಲೆ ಪರಿಣಾಮ ಬೀರುತ್ತಿವೆ. ಪ್ರಯಾಣಿಕರು ಮತ್ತು ನಿವಾಸಿಗಳು ಮುನ್ನೆಚ್ಚರಿಕೆ ವಹಿಸಿ, ಸ್ಥಳೀಯ ಸಲಹೆಗಳನ್ನು ಅನುಸರಿಸಿ.

