ಕಾಫ್‌ ಸಿರಪ್‌ ಸ್ಮಗ್ಲಿಂಗ್‌: ಉತ್ತರ ಪ್ರದೇಶದಲ್ಲಿ 12 ಫಾರ್ಮಾ ಕಂಪನಿಗಳ ವಿರುದ್ಧ ಪ್ರಕರಣ ದಾಖಲು

ಲಕ್ನೋ: ವಾರಣಾಸಿಯಲ್ಲಿ ಕೋಡೀನ್ ಹೊಂದಿರುವ ಕಾಫ್ ಸಿರಪ್‌ ಕಳ್ಳಸಾಗಣೆ ಪ್ರಕರಣದ ಹಿನ್ನೆಲೆ, ಉತ್ತರ ಪ್ರದೇಶ ಸರ್ಕಾರದ ಆಹಾರ ಮತ್ತು ಔಷಧ ಇಲಾಖೆ 12 ಫಾರ್ಮಾ ಕಂಪನಿಗಳ ವಿರುದ್ಧ ಹೊಸ ಪ್ರಕರಣ ದಾಖಲಿಸಿದೆ. ಕಳೆದ ನವೆಂಬರ್‌ 15ರಂದು ನಡೆದ ಕಾರ್ಯಾಚರಣೆಯಲ್ಲಿ 26 ಕಂಪನಿಗಳ ವಿರುದ್ಧ FIR ದಾಖಲಿಸಲಾಗಿತ್ತು. ಅದೇ ಕಾರ್ಯಾಚರಣೆಯನ್ನು ಮುಂದುವರಿಸಿದಾಗ ಮತ್ತಷ್ಟು 12 ಅನುಮಾನಾಸ್ಪದ ಕಂಪನಿಗಳು ಪತ್ತೆಯಾಗಿದ್ದವು ಎಂದು ಇಲಾಖೆಯ ಇನ್ಸ್‌ಪೆಕ್ಟರ್ ಜನಬ್ ಅಲಿ ತಿಳಿಸಿದ್ದಾರೆ.

ತನಿಖಾ ತಂಡವು ಈ ಕಂಪನಿಗಳ ವಿಳಾಸಗಳಿಗೆ ಭೇಟಿ ನೀಡಿದಾಗ, ಕೆಲವು ಕಂಪನಿಗಳು ಮುಚ್ಚಿರುವುದು, ಇನ್ನಿತರ ವಿಳಾಸಗಳಲ್ಲಿ ಬೇರೆ ಮಳಿಗೆಗಳು ಕಾರ್ಯನಿರ್ವಹಿಸುತ್ತಿರುವುದು ಕಂಡುಬಂದಿದೆ. ಇದನ್ನು ಗಮನಿಸಿ, ಈ ಕಂಪನಿಗಳ ನಿರ್ವಾಹಕರಿಗೆ ಸ್ಪಷ್ಟೀಕರಣಕ್ಕಾಗಿ ನೋಟಿಸ್‌ ನೀಡಲಾಗಿತ್ತು ಎಂದು ಅಲಿ ಹೇಳಿದರು. ಆದರೆ, ಕಂಪನಿಗಳ ಮಾಲೀಕರು ಯಾವ ರೀತಿಯ ಪ್ರತಿಕ್ರಿಯೆಯನ್ನೂ ನೀಡದ ಕಾರಣ, ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿರುವುದಾಗಿ ಅವರು ತಿಳಿಸಿದ್ದಾರೆ.