ಕೊಡಿಗೆಹಳ್ಳಿಯಲ್ಲಿ ಮಿತಿ ಮೀರಿದ ಬೀದಿ ನಾಯಿಗಳ ಹಾವಳಿ – ಜನರನ್ನು ತಲ್ಲಣಗೊಳಿಸಿದ ‘ಬೌಬೌ ಗ್ಯಾಂಗ್’!

ಬೆಂಗಳೂರು: ಕೊಡಿಗೆಹಳ್ಳಿಯ ಕೆಂಪೇಗೌಡ ನಗರದಲ್ಲಿ ಬೀದಿ ನಾಯಿಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಜನ ಸಾಮಾನ್ಯರು ರಸ್ತೆಗೆ ಬರಲು ಹೆದರುವ ಪರಿಸ್ಥಿತಿ ಉಂಟಾಗಿದೆ. ಸುಮಾರು ಎರಡು ವಾರಗಳ ಹಿಂದೆ ವಿರೇಶ್‌ (33) ಎಂಬ ಯುವಕನ ಮೇಲೆ ಸುಮಾರು 20 ಬೀದಿ ನಾಯಿಗಳ ಗುಂಪು ದಾಳಿ ನಡೆಸಿ ತೀವ್ರವಾಗಿ ಗಾಯಗೊಳಿಸಿತ್ತು. ಕೈ, ಕಾಲು, ತಲೆ, ಕುತ್ತಿಗೆ… ದೇಹದ ಹಲವೆಡೆ ಮಾಂಸ ಕಚ್ಚಿದ ಪರಿಣಾಮ ವಿರೇಶ್‌ ಅವರನ್ನು ತುರ್ತುವಾಗಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಸದ್ಯ ಅವರು ಮನೆಯಲ್ಲೇ ಚೇತರಿಸಿಕೊಳ್ಳುತ್ತಿದ್ದು, ಯಾವುದೇ ಪರಿಹಾರ ದೊರಕದ ಕಾರಣ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಗಂಭೀರ ಗಾಯಗಳಿಂದಾಗಿ ಕೆಲಸಕ್ಕೂ ಹೋಗಲು ಸಾಧ್ಯವಾಗದೇ ಕುಟುಂಬ ಸಾಗಿಸಲು ತೊಂದರೆ ಆಗುತ್ತಿದೆ. ಚಿಕಿತ್ಸಾ ವೆಚ್ಚ ಮತ್ತು ಔಷಧಿಗಳಿಗೆ ಹಣ ಕಟ್ಟಲು ಸಾಧ್ಯವಾಗುತ್ತಿಲ್ಲ ಎಂಬ ಆತಂಕವನ್ನು ವಿರೇಶ್‌ ವ್ಯಕ್ತಪಡಿಸಿದ್ದಾರೆ.

ವಿರೇಶ್‌ ಗಣೇಶನಗರದ ದೊಡ್ಡ ಬೊಮ್ಮಸಂದ್ರ ಕೆರೆ ಕಡೆ ಹೋಗುತ್ತಿದ್ದಾಗ ಈ ದಾಳಿ ನಡೆದಿದೆ. ಇದಕ್ಕೂ ಮೊದಲು ಪಕ್ಕದ ಟೆಲಿಕಾಂ ಲೇಔಟ್‌ನಲ್ಲಿ ಸೀತಪ್ಪ ಎಂಬ ವೃದ್ಧ ನಾಯಿ ದಾಳಿಗೆ ಬಲಿಯಾಗಿದ್ದರು. ಘಟನೆಗಳ ನಂತರ ಜಿಬಿಎ ಅಧಿಕಾರಿಗಳು ನಾಯಿಗಳನ್ನು ಹಿಡಿದುಕೊಂಡು ಹೋದರೂ, ಕೆವಲ ಒಂದು ವಾರದಲ್ಲೇ ಮತ್ತೆ ನಾಯಿಗಳ ಗುಂಪು ಪ್ರದೇಶದಲ್ಲಿ ಕಾಣಿಸಿಕೊಂಡಿದೆ.

ನಾಯಿ ಹಾವಳಿಯಿಂದ ಸ್ಥಳೀಯರು ಭಯಭೀತರಾಗಿದ್ದು, ರಾತ್ರಿ ಸಮಯದಲ್ಲಿ ನಾಯಿಗಳ ಗದ್ದಲದಿಂದ ನಿದ್ರೆ ಕಸಿದುಕೊಳ್ಳುತ್ತಿದೆ, ರಸ್ತೆಯಲ್ಲಿ ನಡೆಯಲು ಹಿಂದೇಟು ಹಾಕುವಂತಾಗಿದೆ, ಪಾರ್ಕ್‌ನಲ್ಲಿ ವಾಕಿಂಗ್‌ಗೆ ಹೋಗಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ನಿವಾಸಿಗಳು ಕಳವಳ ವ್ಯಕ್ತಪಡಿಸಿದ್ದಾರೆ. ಜನರ ಭೀತಿಯನ್ನು ನೀಗಿಸಲು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.