ಜಮ್ಮು-ಕಾಶ್ಮೀರದಲ್ಲಿ ಭೀಕರ ಸ್ಫೋಟ; ಇಬ್ಬರು ಅಧಿಕಾರಿಗಳು ಸೇರಿ 9 ಮಂದಿ ಸಾ**

ಶ್ರೀನಗರ: ದೆಹಲಿಯ ಕೆಂಪುಕೋಟೆ ಕಾರ್‌ ಸ್ಫೋಟ ಪ್ರಕರಣದ ಗದ್ದಲ ಶಾಂತವಾಗುವ ಮುನ್ನವೇ ಜಮ್ಮು–ಕಾಶ್ಮೀರದಲ್ಲಿ ಭೀಕರ ಸ್ಫೋಟ ಸಂಭವಿಸಿದೆ. ಶ್ರೀನಗರದ ನೌಗಮ್ ಪೊಲೀಸ್‌ ಠಾಣೆ ಬಳಿ ಉಂಟಾದ ಭಾರೀ ಸ್ಫೋಟದಲ್ಲಿ ಇಬ್ಬರು ಅಧಿಕಾರಿಗಳು ಸೇರಿ 9 ಮಂದಿ ಸಾವನ್ನಪ್ಪಿದ್ದಾರೆ. 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಪ್ರಾಥಮಿಕ ವರದಿಗಳು ತಿಳಿಸುತ್ತವೆ.

ರಾತ್ರಿಯ ಮೌನವನ್ನು ಭೇದಿಸಿದ ಸ್ಫೋಟದ ಗದ್ದಲಕ್ಕೆ ಸುತ್ತಮುತ್ತಲಿನ ನಿವಾಸಿಗಳು ಬೆಚ್ಚಿಬಿದ್ದಿದ್ದಾರೆ. ಸ್ಫೋಟದ ತೀವ್ರತೆಗೆ ಹಲವಾರು ವಾಹನಗಳು ಬೆಂಕಿಗೆ ಆಹುತಿಯಾಗಿದ್ದು, ಸಮೀಪದ ಮನೆಗಳ ಕಿಟಕಿ ಗಾಜುಗಳು ಒಡೆದಿವೆ. ಮಾನವ ದೇಹದ ಅವಶೇಷಗಳು ಸುಮಾರು 300 ಅಡಿ ದೂರದವರೆಗೆ ಚದುರಿಕೊಂಡಿರುವುದು ಘಟನೆ ಎಷ್ಟು ಭೀಕರವಾಗಿತ್ತು ಎನ್ನುವುದಕ್ಕೆ ಸಾಕ್ಷಿಯಾಗಿದೆ ಎಂದು ಮೂಲಗಳು ತಿಳಿಸಿವೆ.

ಶುಕ್ರವಾರ ತಡರಾತ್ರಿ 11:22ರ ಸುಮಾರಿಗೆ ಸ್ಫೋಟ ಸಂಭವಿಸಿದ್ದು, ಮೃತರ ಸಂಖ್ಯೆ ಇನ್ನೂ ಏರಬಹುದೆಂದು ಅಧಿಕಾರಿಗಳು ತಿಳಿಸಿದ್ದಾರೆ. 30ಕ್ಕೂ ಹೆಚ್ಚು ಗಾಯಾಳುಗಳನ್ನು ತಕ್ಷಣ ಸ್ಥಳೀಯ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಕೆಲವರ ಸ್ಥಿತಿ ಗಂಭೀರವಾಗಿದೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ಸ್ಫೋಟದ ತೀವ್ರತೆಯಿಂದ ಬೆಂಕಿಯ ಜ್ವಾಲೆಗಳು ಮುಗಿಲೆತ್ತರಕ್ಕೆ ಚಿಮ್ಮಿದ ಕಾರಣ, ರಕ್ಷಣಾ ತಂಡಗಳು ಸ್ಥಳಕ್ಕೆ ತಲುಪಿ ಕಾರ್ಯಾಚರಣೆ ಆರಂಭಿಸಲು ಸುಮಾರು ಒಂದು ಗಂಟೆ ತಡವಾಯಿತು ಎಂದು ತಿಳಿದುಬಂದಿದೆ.