ಕಬ್ಬು ರೈತರ ಅಸಮಾಧಾನ ಶಮನಕ್ಕೆ ಖುದ್ದು ಅಖಾಡಕ್ಕಿಳಿದ ಸಿಎಂ ಸಿದ್ದರಾಮಯ್ಯ – ಕೇಂದ್ರ ನೆರವಿಗಾಗಿ ಮೋದಿಗೆ ಪತ್ರ

ಬೆಂಗಳೂರು: ಪ್ರತೀ ಟನ್ ಕಬ್ಬಿಗೆ ₹3,500 ದರ ನಿಗದಿ ಮಾಡಬೇಕು ಎಂದು ಒತ್ತಾಯಿಸುತ್ತಿರುವ ರೈತರ ಹೋರಾಟ ದಿನೇದಿನೇ ತೀವ್ರಗೊಳ್ಳುತ್ತಿದೆ. ದಿನವೂ ಒಬ್ಬೊಬ್ಬ ಸಚಿವರು ಪ್ರತಿಭಟನಾ ಸ್ಥಳಕ್ಕೆ ತೆರಳಿ ಮಾತುಕತೆ ನಡೆಸುತ್ತಿದ್ದರೂ ಸಮಸ್ಯೆ ಬಗೆಹರಿಯದ ಹಿನ್ನೆಲೆಯಲ್ಲಿ, ಕಬ್ಬಿನ ಕಿಚ್ಚು ಆರಿಸಲು ಸ್ವತಃ ಸಿಎಂ ಸಿದ್ದರಾಮಯ್ಯ ಅಖಾಡಕ್ಕಿಳಿದಿದ್ದಾರೆ.

ರೈತರ ಹೋರಾಟಕ್ಕೆ ಕೇಂದ್ರ ಸರ್ಕಾರ ನೆರವಿಗೆ ಬರಬೇಕೆಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ಕಬ್ಬು ಬೆಳೆಗಾರರ ಸಮಸ್ಯೆ ಕುರಿತು ಚರ್ಚಿಸಲು ಸಮಯ ನೀಡುವಂತೆ ಪತ್ರದಲ್ಲಿ ಕೋರಿದ್ದಾರೆ. ಬೆಳಗಾವಿ, ಬಾಗಲಕೋಟೆ, ವಿಜಯಪುರ, ವಿಜಯನಗರ, ಬೀದರ್, ಗದಗ, ಹುಬ್ಬಳ್ಳಿ-ಧಾರವಾಡ ಹಾಗೂ ಹಾವೇರಿ ಜಿಲ್ಲೆಗಳಲ್ಲಿ ಕಬ್ಬು ರೈತರ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ ಎಂದು ಸಿಎಂ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ರಾಜ್ಯ ಸರ್ಕಾರ ಈಗಾಗಲೇ ರೈತರ ಸಮಸ್ಯೆ ಬಗೆಹರಿಸಲು ಸಕ್ಕರೆ ಕಾರ್ಖಾನೆ ಮಾಲೀಕರೊಂದಿಗೆ ಹಲವು ಸುತ್ತಿನ ಚರ್ಚೆ ನಡೆಸಿದೆ. ಕಟಾವು ಮತ್ತು ಸಾರಿಗೆ ವೆಚ್ಚ ಹೆಚ್ಚಿರುವುದರಿಂದ ರೈತರಿಗೆ ಪ್ರತಿ ಟನ್‌ಗೆ ಕೇವಲ ₹2,600 ರಿಂದ ₹3,000 ಮಾತ್ರ ಲಾಭ ಉಳಿಯುತ್ತದೆ. ಪ್ರತಿ ಟನ್‌ಗೆ ₹800-₹900ರವರೆಗೆ ಕಟಾವು ಮತ್ತು ಸಾರಿಗೆ ವೆಚ್ಚವಾಗುತ್ತದೆ.

ರೈತರ ಹಿತದೃಷ್ಟಿಯಿಂದ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಬೇಕೆಂದು ಸಿಎಂ ಮನವಿ ಮಾಡಿದ್ದಾರೆ. ಜಿಲ್ಲಾಧಿಕಾರಿಗಳು 11.25% ವಸೂಲಾತಿ ದರಕ್ಕೆ ₹3,200 ಹಾಗೂ 10.25% ದರಕ್ಕೆ ₹3,100 ಪಾವತಿಸಲು ಕಾರ್ಖಾನೆಗಳಿಗೆ ಸೂಚನೆ ನೀಡಿದ್ದಾರೆ. ಇದರಲ್ಲಿ ಕಟಾವು ಮತ್ತು ಸಾರಿಗೆ ಶುಲ್ಕಗಳೂ ಸೇರಿವೆ. ಸರ್ಕಾರ ಡಿಜಿಟಲ್ ತೂಕ ವ್ಯವಸ್ಥೆ, ಪಾವತಿ ಮೇಲ್ವಿಚಾರಣೆ ಸಮಿತಿಗಳು ಹಾಗೂ APMC ಕೇಂದ್ರಗಳಲ್ಲಿ ಉಚಿತ ತೂಕದ ಯಂತ್ರಗಳನ್ನು ಒದಗಿಸಿರುವುದಾಗಿ ಸಿಎಂ ತಿಳಿಸಿದ್ದಾರೆ. ಆದರೆ ರೈತರು ಇನ್ನೂ ಅತೃಪ್ತರಾಗಿದ್ದು, ಬೇಡಿಕೆ ಈಡೇರಿಸದಿದ್ದರೆ ಹೆದ್ದಾರಿ ತಡೆ ಸೇರಿದಂತೆ ತೀವ್ರ ಹೋರಾಟ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ.

2025-26ರ ಋತುವಿಗೆ ಕೇಂದ್ರ ನಿಗದಿಪಡಿಸಿದ FRP ಪ್ರತಿ ಟನ್‌ಗೆ ₹23,550 ಆಗಿದ್ದರೂ, ಉತ್ಪಾದನಾ ವೆಚ್ಚಗಳ ಏರಿಕೆಯಿಂದ ಈ ದರವು ರೈತರಿಗೆ ಲಾಭದಾಯಕವಾಗಿಲ್ಲ ಎಂದು ಸಿಎಂ ಪತ್ರದಲ್ಲಿ ತಿಳಿಸಿದ್ದಾರೆ. ಆದ್ದರಿಂದ ಕೇಂದ್ರ ಸರ್ಕಾರ ತಕ್ಷಣ ಮಧ್ಯಪ್ರವೇಶಿಸಿ, ರೈತರಿಗೆ ನ್ಯಾಯಯುತ ಬೆಲೆ ದೊರಕುವಂತೆ ಕ್ರಮ ಕೈಗೊಳ್ಳುವಂತೆ ವಿನಂತಿಸಿದ್ದಾರೆ.