ಬೆಂಗಳೂರು: ಬಿಹಾರ ವಿಧಾನಸಭಾ ಚುನಾವಣೆಯನ್ನು ನವೆಂಬರ್ 6 ಮತ್ತು 11ರಂದು ಹಂತ ಹಂತವಾಗಿ ನಡೆಸಲಿರುವ ಹಿನ್ನೆಲೆ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇಂದು (ನ.2) ಬೆಂಗಳೂರಿನಲ್ಲಿರುವ ಬಿಹಾರ ಮೂಲದ ಜನರನ್ನು ಭೇಟಿಯಾಗಲಿದ್ದಾರೆ. ಇಂಡಿ ಒಕ್ಕೂಟದ ಪರವಾಗಿ ಮತಬೇಟೆ ನಡೆಸುವ ಉದ್ದೇಶದಿಂದ ಡಿಕೆಶಿ ಅವರು ಇಂದು ಸಂಜೆ 5 ಗಂಟೆಗೆ ಬೆಂಗಳೂರಿನ ಬಿಹಾರ ಸಮುದಾಯದ ಪ್ರತಿನಿಧಿಗಳೊಂದಿಗೆ ಸಂವಾದ ನಡೆಸಲಿದ್ದಾರೆ.

ಕಾರ್ಮಿಕ ಇಲಾಖೆಯ ಮಾಹಿತಿ ಪ್ರಕಾರ, ಬೆಂಗಳೂರಿನಲ್ಲಿ 24,000 ನೋಂದಾಯಿತ ಬಿಹಾರ ವಲಸೆ ಕಾರ್ಮಿಕರಿದ್ದು, ಒಟ್ಟು 8 ಲಕ್ಷಕ್ಕೂ ಹೆಚ್ಚು ಮಂದಿ ಬಿಹಾರಿಗಳು ನಗರದಲ್ಲಿ ವಾಸಿಸುತ್ತಿದ್ದಾರೆ. ಇವರಲ್ಲಿ ಶೇಕಡಾ 80ರಷ್ಟು ಮಂದಿ ನಿರ್ಮಾಣ, ಸಾರಿಗೆ, ಸಣ್ಣ ಕೈಗಾರಿಕೆ ಮತ್ತು ಆಹಾರ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಉಳಿದವರು ವೃತ್ತಿಪರರು ಮತ್ತು ವಿದ್ಯಾರ್ಥಿಗಳು. ಬಹುತೇಕರು ಸರ್ಜಾಪುರ, ಎಲೆಕ್ಟ್ರಾನಿಕ್ಸ್ ಸಿಟಿ, ವೈಟ್ಫೀಲ್ಡ್, ಯಲಹಂಕ, ಯಶವಂತಪುರ ಹಾಗೂ ಪೀಣ್ಯದಂತಹ ಪ್ರದೇಶಗಳಲ್ಲಿ ನೆಲೆಸಿದ್ದಾರೆ ಎಂದು ತಿಳಿದುಬಂದಿದೆ.
ನವೆಂಬರ್ 6ರಂದು 121 ಕ್ಷೇತ್ರಗಳಿಗೆ ಮತ್ತು 11ರಂದು 122 ಕ್ಷೇತ್ರಗಳಿಗೆ ಮತದಾನ ನಡೆಯಲಿದ್ದು, ನವೆಂಬರ್ 14ರಂದು ಮತ ಎಣಿಕೆ ನಡೆಯಲಿದೆ.
