ರಷ್ಯಾದಿಂದ ತೈಲ ಖರೀದಿಯನ್ನು ಭಾರತ ಕಡಿಮೆ ಮಾಡಲಿದೆ, ಪ್ರಧಾನಿ ಮೋದಿಯಿಂದ ಭರವಸೆ ಸಿಕ್ಕಿದೆ – ಟ್ರಂಪ್

ವಾಷಿಂಗ್ಟನ್, ಅಕ್ಟೋಬರ್ 22: ಭಾರತವು ರಷ್ಯಾದಿಂದ ಹೆಚ್ಚಿನ ತೈಲ ಖರೀದಿ ಮಾಡುವುದಿಲ್ಲವೆಂದು ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿರುವುದಾಗಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ. ದೀಪಾವಳಿ ಶುಭಾಶಯ ತಿಳಿಸಲು ಪ್ರಧಾನಿ ಮೋದಿಗೆ ಕರೆ ಮಾಡಿದ ಸಂದರ್ಭದಲ್ಲಿ ಈ ಮಾತುಕತೆ ನಡೆದಿದೆ ಎಂದು ಟ್ರಂಪ್ ಸ್ವತಃ ಹೇಳಿದ್ದಾರೆ. ಶುಭಾಶಯ ವಿನಿಮಯದ ವೇಳೆ ರಷ್ಯಾದಿಂದ ಭಾರತ ತೈಲ ಖರೀದಿಸುತ್ತಿರುವ ವಿಚಾರದಲ್ಲೂ ಚರ್ಚೆ ನಡೆದಿದೆ ಎಂದು ಅವರು ತಿಳಿಸಿದ್ದಾರೆ.

ಈ ಸಂಭಾಷಣೆಯನ್ನು ಪ್ರಧಾನಿ ಮೋದಿ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು, “ಅಧ್ಯಕ್ಷ ಡೊನಾಲ್ಡ್ ಟ್ರಂಪ್, ನಿಮ್ಮ ಫೋನ್ ಕರೆ ಹಾಗೂ ದೀಪಾವಳಿ ಶುಭಾಶಯಗಳಿಗೆ ಧನ್ಯವಾದಗಳು. ಈ ಬೆಳಕಿನ ಹಬ್ಬದಂದು, ನಮ್ಮ ಎರಡು ಪ್ರಜಾಪ್ರಭುತ್ವ ರಾಷ್ಟ್ರಗಳು ಜಗತ್ತನ್ನು ಬೆಳಗಿಸಲು ಮತ್ತು ಭಯೋತ್ಪಾದನೆಯ ವಿರುದ್ಧ ಒಗ್ಗಟ್ಟಿನಿಂದ ನಿಲ್ಲಲು ಪ್ರೇರಣೆಯಾದಂತಾಗಲಿ” ಎಂದು ಹೇಳಿದ್ದಾರೆ. ಇದಕ್ಕೂ ಮುನ್ನ ಟ್ರಂಪ್, “ಪ್ರಧಾನಮಂತ್ರಿ ಮೋದಿ ರಷ್ಯಾ-ಉಕ್ರೇನ್ ಯುದ್ಧವನ್ನು ಕೊನೆಗೊಳಿಸಲು ಬಯಸುತ್ತಾರೆ ಮತ್ತು ರಷ್ಯಾದಿಂದ ತೈಲ ಖರೀದಿಯನ್ನು ಕಡಿಮೆ ಮಾಡುವ ಭರವಸೆ ನೀಡಿದ್ದಾರೆ” ಎಂದು ಹೇಳಿದ್ದಾರೆ.

ದೀಪಾವಳಿ ಪ್ರಯುಕ್ತ ಶ್ವೇತಭವನದಲ್ಲಿ ದೀಪ ಬೆಳಗಿಸಿ ಸಂಭ್ರಮಿಸಿದ ಟ್ರಂಪ್, ಪ್ರಧಾನಿ ಮೋದಿಯನ್ನು “ಮಹಾನ್ ವ್ಯಕ್ತಿ ಮತ್ತು ಉತ್ತಮ ಸ್ನೇಹಿತ” ಎಂದು ಕೊಂಡಾಡಿದ್ದಾರೆ. “ಪ್ರಧಾನಮಂತ್ರಿ ಮೋದಿ ಒಬ್ಬ ವಿಶಿಷ್ಟ ನಾಯಕ, ಅವರೊಂದಿಗೆ ನನ್ನ ಸ್ನೇಹ ವರ್ಷಗಳಿಂದ ಗಾಢವಾಗಿದೆ,” ಎಂದು ಟ್ರಂಪ್ ತಿಳಿಸಿದ್ದಾರೆ.