ಚಾಮರಾಜನಗರ, ಅಕ್ಟೋಬರ್ 16: ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೇರಿದ ಕಾಂಗ್ರೆಸ್ ಸರ್ಕಾರ ಪಂಚ ಗ್ಯಾರಂಟಿಗಳನ್ನೊಡ್ಡಿ ಜನರ ಮನ ಗೆದ್ದಿತ್ತು. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ಉಚಿತ ವಿದ್ಯುತ್, ತಿಂಗಳಿಗೆ 2,000 ಹಣ ವರ್ಗಾವಣೆ, ಅನ್ನಭಾಗ್ಯ ಹಾಗೂ ಸ್ಕಾಲರ್‌ಶಿಪ್ ಯೋಜನೆಗಳಂತೆ ಹಲವು ಗ್ಯಾರಂಟಿಗಳನ್ನು ಜಾರಿಗೊಳಿಸಿದೆ. ಆದರೆ ಈ ಯೋಜನೆಗಳ ಭಾರದಿಂದ ಹಣದುಬ್ಬರ ಹೆಚ್ಚಾಗಿ, ಬೆಲೆ ಏರಿಕೆ ಕಾಣುತ್ತಿದೆ ಎಂಬ ಟೀಕೆ ಕೇಳಿಬಂದಿದೆ.

ಇದೀಗ ಕೇಂದ್ರ ಸರ್ಕಾರ ಜಿಎಸ್‌ಟಿ ಕಡಿತ ಮಾಡಿದ ಹಿನ್ನೆಲೆ, ರಾಜ್ಯ ಸರ್ಕಾರದ ಆದಾಯಕ್ಕೆ ಬಿರುಕು ಬಿದ್ದಿದೆ. ಈ ನಷ್ಟವನ್ನು ಭರಿಸುವ ಸಲುವಾಗಿ ಸರ್ಕಾರ ಅಬಕಾರಿ ಇಲಾಖೆಗೆ ಮದ್ಯ ಮಾರಾಟ ಹೆಚ್ಚಿಸುವ ಸೂಚನೆ ನೀಡಿದೆ ಎನ್ನಲಾಗುತ್ತಿದೆ. ಇಲಾಖೆಯ ಅಧಿಕಾರಿಗಳು ಬಾರ್ ಮಾಲೀಕರಿಗೆ “ಒಂದು ಲೀಟರ್ ಮಾರುವ ಬದಲು 10 ಲೀಟರ್ ಮಾರಾಟ ಮಾಡಿ” ಎಂದು ಕಟ್ಟಪ್ಪಣೆ ಹಾಕಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.
ಈ ಕ್ರಮಕ್ಕೆ ಕೆಂಡಾಮಂಡಲರಾಗಿರುವ ಬಾರ್ ಮಾಲೀಕರು ರಾಜ್ಯ ಸರ್ಕಾರ ಹಾಗೂ ಅಬಕಾರಿ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಕುಡಿಯದವರನ್ನು ಬಲವಂತವಾಗಿ ಮದ್ಯ ಖರೀದಿಸಲು ಹೇಗೆ ಪ್ರೇರೇಪಿಸಬಹುದು? ವರ್ಷದಿಂದ ವರ್ಷಕ್ಕೆ ಸೇಲ್ಸ್ ಹತ್ತು ಪಟ್ಟು ಹೆಚ್ಚಿಸಬೇಕು ಅಂದರೆ ಹೇಗೆ ಸಾಧ್ಯ?” ಎಂದು ಅವರು ಪ್ರಶ್ನಿಸಿದ್ದಾರೆ.

ರಾಜ್ಯ ಸರ್ಕಾರ ತನ್ನ ಬೊಕ್ಕಸ ತುಂಬಿಸಿಕೊಳ್ಳಲು ಮದ್ಯ ಮಾರಾಟಗಾರರ ಮೇಲೆ ಒತ್ತಡ ಹಾಕುವುದು ನ್ಯಾಯಸಂಗತವಲ್ಲ ಎಂದು ಬಾರ್ ಮಾಲೀಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಮದ್ಯಮುಕ್ತ ಮತ್ತು ತಂಬಾಕುಮುಕ್ತ ರಾಜ್ಯ” ಮಾಡುವ ಮಾತು ನೀಡಿದ ಸರ್ಕಾರವೇ ಈಗ ಹಣದ ಆಸೆಗಾಗಿ ಅದನ್ನೇ ಉತ್ತೇಜಿಸುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ. ಇದೇ ರೀತಿಯ ಒತ್ತಡ ಮುಂದುವರಿದರೆ, ರಾಜ್ಯವ್ಯಾಪಿ ಹೋರಾಟ ನಡೆಸುವುದಾಗಿ ಬಾರ್ ಮಾಲೀಕರು ಎಚ್ಚರಿಸಿದ್ದಾರೆ.
