ದರ್ಶನ್‌ಗೆ ಮತ್ತೆ ಕಾಡಿದೆ ಬೆನ್ನು ನೋವು; ಚಿಕಿತ್ಸೆಗೆ ಮನವಿ ಮಾಡಿದ ನಟ

ದರ್ಶನ್‌ಗೆ ಜೈಲಿನಲ್ಲಿ ಮತ್ತೆ ತೀವ್ರ ಬೆನ್ನುನೋವು ಕಾಡುತ್ತಿದೆ. ಹಿಂದೆ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳದ ಕಾರಣದಿಂದ ಇದೀಗ ಅವರ ಆರೋಗ್ಯ ಹದಗೆಟ್ಟಿದೆ ಎಂದು ತಿಳಿದುಬಂದಿದೆ. ಬೆನ್ನುನೋವು ತೀವ್ರವಾಗಿರುವುದರಿಂದ ದರ್ಶನ್ ಅವರು ಚಿಕಿತ್ಸೆಗೆ ಮನವಿ ಮಾಡಿದ್ದು, ಫಿಸಿಯೋಥೆರಪಿ ಹಾಗೂ ಮೊಣಕೈ ನೋವಿಗೂ ಚಿಕಿತ್ಸೆ ನೀಡಲು ಅಧಿಕಾರಿಗಳು ಚಿಂತನೆ ನಡೆಸುತ್ತಿದ್ದಾರೆ.

ಈ ಹಿಂದೆ ಕೂಡ ಬೆನ್ನುನೋವು ಕಾಡುತ್ತಿದ್ದ ಸಂದರ್ಭದಲ್ಲಿ ದರ್ಶನ್ ಮಧ್ಯಂತರ ಜಾಮೀನು ಪಡೆದು ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಬೇಕಾಗಿತ್ತು. ಆದರೆ ಸಿನಿಮಾ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದ ಕಾರಣ ಸರ್ಜರಿ ಮಾಡಿಸಿಕೊಳ್ಳಲಾಗಿಲ್ಲ. ಈಗ ಮತ್ತೆ ಜೈಲಿಗೆ ಹಿಂತಿರುಗಿದ ನಂತರ, ಬೆನ್ನುನೋವು ಮರುಕಳಿಸಿದೆ. ದರ್ಶನ್ ಅವರು ಜೈಲಾಧಿಕಾರಿಗಳಿಗೆ ಪತ್ರ ಬರೆದು ವೈದ್ಯಕೀಯ ಚಿಕಿತ್ಸೆಗೆ ವಿನಂತಿ ಸಲ್ಲಿಸಿರುವುದಾಗಿ ವರದಿ ಬಂದಿದೆ. ಕಳೆದ ಒಂದು ವಾರದಿಂದ ಬೆನ್ನುನೋವು ಹೆಚ್ಚಾಗಿದ್ದು, ಕುಂಟುತ್ತಲೇ ನಡೆಯುತ್ತಿರುವುದಾಗಿ ಮೂಲಗಳು ತಿಳಿಸಿವೆ.

ಅವರ ಮನವಿಯ ಮೇರೆಗೆ ಸಿವಿ ರಾಮನ್ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆ ನಡೆಸಲಾಗಿದ್ದು, ವೈದ್ಯರು ವಾರಕ್ಕೆ ಎರಡು ಬಾರಿ ಫಿಸಿಯೋಥೆರಪಿ ಅಗತ್ಯವಿದೆ ಎಂದು ಸೂಚಿಸಿದ್ದಾರೆ. ಇದಲ್ಲದೆ, ದರ್ಶನ್ ಅವರು ಮೊಣಕೈ ನೋವು ಕೂಡ ತೀವ್ರವಾಗಿದೆ ಎಂದು ದೂರಿದ್ದಾರೆ. ಕಾರು ಅಪಘಾತದ ವೇಳೆ ಮೊಣಕೈಗೆ ಪೆಟ್ಟು ಬಿದ್ದು ಶಸ್ತ್ರಚಿಕಿತ್ಸೆ ನಡೆದಿತ್ತು ಮತ್ತು ಕೈಗೆ ರಾಡ್ ಹಾಕಲಾಗಿತ್ತು. ಇದೀಗ ನೋವು ಹೆಚ್ಚಾಗಿ ಎರಡು ಬೆರಳುಗಳು ಮರಗಟ್ಟಿವೆ ಎನ್ನಲಾಗಿದೆ. ದರ್ಶನ್ ಅವರು ಪ್ರಸ್ತುತ ನೆಲದ ಮೇಲೆಯೇ ಮಲಗುತ್ತಿದ್ದು, ಶೀತಾಂಶದಿಂದ ಬೆನ್ನುನೋವು ಮತ್ತಷ್ಟು ಹೆಚ್ಚಾಗಿದೆ ಎಂದು ಮೂಲಗಳು ಹೇಳಿವೆ. ಹೀಗಾಗಿ, ಮೊಣಕೈ ನೋವಿಗೂ ಚಿಕಿತ್ಸೆ ನೀಡುವ ಕುರಿತು ಜೈಲು ಅಧಿಕಾರಿಗಳು ಕ್ರಮ ಕೈಗೊಳ್ಳಲು ಚಿಂತನೆ ನಡೆಸುತ್ತಿದ್ದಾರೆ.