ಹಾಸನಾಂಬ ದೇವಾಲಯಕ್ಕೆ ಕೇವಲ ಎರಡು ದಿನಗಳಲ್ಲಿ ಕೋಟಿ ಕೋಟಿ ಆದಾಯ

ಹಾಸನ: ಹಾಸನಾಂಬ ಹಾಗೂ ಶ್ರೀ ಸಿದ್ದೇಶ್ವರಸ್ವಾಮಿ ಜಾತ್ರಾ ಮಹೋತ್ಸವಕ್ಕೆ ಭಕ್ತರ ಸಡಗರದಿಂದ ಚಾಲನೆ ದೊರೆತಿದ್ದು, ಕೇವಲ ಎರಡೇ ದಿನಗಳಲ್ಲಿ ದೇವಾಲಯಕ್ಕೆ ಕೋಟಿ ಕೋಟಿ ಆದಾಯ ಹರಿದುಬಂದಿದೆ. ಗುರುವಾರ ಜಾತ್ರಾ ಮಹೋತ್ಸವಕ್ಕೆ ಶಂಕನಾದ ಮೊಳಗಿದರೆ, ಶುಕ್ರವಾರದಿಂದ ಸಾರ್ವಜನಿಕ ದರ್ಶನ ಆರಂಭಗೊಂಡಿದೆ. ಕೇವಲ ಎರಡು ದಿನಗಳಲ್ಲಿ ಒಟ್ಟು ರೂ .2.25 ಕೋಟಿ ಆದಾಯ ದಾಖಲಾಗಿದೆ.

ಭಾನುವಾರ ಬೆಳಗ್ಗೆ 8 ಗಂಟೆಯವರೆಗೆ 300 ವಿಶೇಷ ದರ್ಶನಕ್ಕೆ 27,759 ಟಿಕೆಟ್‌ಗಳು ಮಾರಾಟವಾಗಿದ್ದು, ಇದರಲ್ಲಿ ಆನ್‌ಲೈನ್ ಮೂಲಕ 4,499 ಮತ್ತು ನೇರ ಖರೀದಿಯಲ್ಲಿ 23,260 ಟಿಕೆಟ್‌ಗಳು ಮಾರಾಟಗೊಂಡಿವೆ. 1,000 ವಿಶೇಷ ದರ್ಶನದ 12,396 ಟಿಕೆಟ್‌ಗಳು ಮಾರಾಟವಾಗಿದ್ದು, ಅದರಲ್ಲಿ 3,912 ಆನ್‌ಲೈನ್ ಬುಕಿಂಗ್‌ಗಳು ಮತ್ತು 8,484 ನೇರ ಖರೀದಿಗಳು ಸೇರಿವೆ.

ಇದೇ ವೇಳೆ, ಲಾಡು ಪ್ರಸಾದ ಮಾರಾಟದ ಸಂಖ್ಯೆ 17,337 ತಲುಪಿದೆ. ಒಟ್ಟಾರೆ, 300 ಟಿಕೆಟ್‌ಗಳಿಂದ ರೂ.83,27,700, 1,000 ಟಿಕೆಟ್‌ಗಳಿಂದ ರೂ. 1,23,96,000, ಮತ್ತು ಲಾಡು ಪ್ರಸಾದದಿಂದ ರೂ. 17,33,700, ಸೇರಿ ಒಟ್ಟು 2 ಕೋಟಿಯ 24 ಲಕ್ಷ 57 ಸಾವಿರ 400 ರೂ. ಆದಾಯ ಬಂದಿದೆ.