ಮುಸ್ಲಿಂ ಜನಸಂಖ್ಯೆ ಶೇ.24.6ಕ್ಕೆ ಏರಿಕೆ!..

ನವದೆಹಲಿ: ಅಕ್ರಮ ವಲಸಿಗರಿಂದಾಗಿ ದೇಶದಲ್ಲಿ ಮುಸ್ಲಿಂ ಜನಸಂಖ್ಯೆ ಶೇ.24.6 ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದ್ದಾರೆ.

ಶುಕ್ರವಾರ ದೈನಿಕ್‌ ಜಾಗರಣ್‌ನ ಮಾಜಿ ಪ್ರಧಾನ ಸಂಪಾದಕ ನರೇಂದ್ರ ಮೋಹನ್‌ ಅವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಮತದಾರರ ಪಟ್ಟಿಗೆ ಅಕ್ರಮ ಸೇರ್ಪಡೆಯು ಸಂವಿಧಾನದ ಧ್ಯೇಯಕ್ಕೆ ಕಳಂಕ ತಂದಂತೆ. ಬಾಂಗ್ಲಾದೇಶ ಮತ್ತು ಪಾಕಿಸ್ತಾನ ವಲಸಿಗರಿಗೆ ನಮ್ಮ ಪ್ರಜಾಪ್ರಭುತ್ವದ ಮೇಲೆ ಪ್ರಭಾವ ಬೀರಲು ಅವಕಾಶ ನೀಡಬಾರದು. ಮತದಾನದ ಹಕ್ಕು ಭಾರತೀಯರಿಗೆ ಮಾತ್ರ ಇರಬೇಕು ಎಂದು ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆಯನ್ನು ಸಮರ್ಥಿಸಿಕೊಂಡರು.

ಈ ನಿಟ್ಟಿನಲ್ಲಿ ಬಿಜೆಪಿಯು 1950ರಿಂದಲೇ ಅಕ್ರಮ ವಲಸಿಗರನ್ನು ಪತ್ತೆ ಹಚ್ಚಿ ಮತದಾರರ ಪಟ್ಟಿಯಿಂದ ಅವರ ಹೆಸರನ್ನು ತೆಗೆದು ಹಾಕಲು ಮತ್ತು ಗಡಿಪಾರು ಸೂತ್ರವನ್ನು ಅಳವಡಿಸಿಕೊಂಡಿದೆ ಎಂದರು.

ಹಲವು ವರ್ಷಗಳಿಂದ ಹಿಂದುಗಳ ಜನಸಂಖ್ಯೆ ಗಣನೀಯವಾಗಿ ಕುಸಿಯುತ್ತಿದೆ. ಮುಸ್ಲಿಂ ಜನಸಂಖ್ಯೆ ಭಾರೀ ಏರಿಕೆ ಕಾಣುತ್ತಿದೆ. 1950ರಲ್ಲಿ ಶೇ.84 ರಷ್ಟಿದ್ದ ಹಿಂದು ಜನಸಂಖ್ಯೆ ಪ್ರಸ್ತುತ ಶೇ.79ಕ್ಕೆ ಇಳಿಕೆಯಾಗಿದೆ. ಶೇ. 9.8 ರಷ್ಟಿದ್ದ ಮುಸ್ಲಿಂ ಜನಸಂಖ್ಯೆ ಪ್ರಸ್ತುತ 14.2ಕ್ಕೆ ಏರಿಕೆ ಕಂಡಿದೆ. ಇದಕ್ಕೆ ಅಕ್ರಮ ವಲಸಿಗರೇ ಕಾರಣ ಎಂದು ದೂರಿದರು.