ಬೆಂಗಳೂರು: ಬಾಂಬೆ ಮಾದರಿಯಲ್ಲಿ ನಗರದ 480 ಕೊಳೆಗೇರಿ ಪ್ರದೇಶಗಳ ಪುನಶ್ಚೇತನಕ್ಕೆ ಸಮಿತಿ ರಚಿಸಲು ಡಿಸಿಎಂ ಡಿ.ಕೆ. ಶಿವಕುಮಾರ್ ಸೂಚನೆ ನೀಡಿದರು. ಜಿಬಿಎ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಸಮಿತಿಯ ಮೊದಲ ಸಭೆಯಲ್ಲಿ ಸಚಿವ ಜಮೀರ್ ಅಹ್ಮದ್ ಬೆಂಗಳೂರಿನಲ್ಲಿ ಕೊಳಗೇರಿ ಪ್ರದೇಶಗಳ ಅಭಿವೃದ್ಧಿ ಆಗಬೇಕು ಎಂದು ವಿಷಯ ಪ್ರಸ್ತಾಪಿಸಿದಾಗ ಅಧಿಕಾರಿಗಳಿಗೆ ಸೂಚಿಸಿದರು.
ಕ್ಷೇತ್ರದಲ್ಲಿ ಕಸದ ಸಮಸ್ಯೆ ಹೆಚ್ಚುತ್ತಿದ್ದು ಇದಕ್ಕೆ ಪರಿಹಾರ ನೀಡಬೇಕು. ಇದನ್ನು ಜಿಬಿಎ ನಿಭಾಯಿಸುವುದೇ ಅಥವಾ ಪಾಲಿಕೆ ನಿಭಾಯಿಸುವುದೇ ಎಂದು ಶಾಸಕ ಎ.ಸಿ. ಶ್ರೀನಿವಾಸ್ ಪ್ರಶ್ನಿಸಿದಾಗ, ಕಸ ವಿಲೇವಾರಿ ವಿಚಾರವಾಗಿ ವಿಧಾನಸಭಾ ಕ್ಷೇತ್ರಕ್ಕೊಂದರಂತೆ 33 ಪ್ಯಾಕೇಜ್ ಟೆಂಡರ್ ಕರೆಯಲಾಗುವುದು. ಈ ವಿಚಾರ ನ್ಯಾಯಾಲಯದಲ್ಲಿದ್ದು ತೀರ್ಪು ಬಂದ ನಂತರ ಕಾರ್ಯ ಮಾಡಲಾಗುವುದು. ಕಸ ವಿಲೇವಾರಿ ಜವಾಬ್ದಾರಿ ಸ್ಥಳೀಯ ಪಾಲಿಕೆ ನಿಭಾಯಿಸಲಿವೆ ಎಂದು ಹೇಳಿದರು.

ತಮ್ಮ ಪ್ರದೇಶವನ್ನು ಜಿಬಿಎ ವ್ಯಾಪ್ತಿಗೆ ಸೇರಿಸಿಕೊಳ್ಳುವ ಬಗ್ಗೆ ಆನೇಕಲ್ ಶಾಸಕರು ಕೇಳಿದಾಗ, ಈಗ ಘೋಷಣೆ ಆಗಿರುವ ಜಿಬಿಎ ವ್ಯಾಪ್ತಿಯಲ್ಲಿ ಮೊದಲು ಚುನಾವಣೆ ಆಗಲಿದೆ. ನಂತರ ಎಲ್ಲೆಲ್ಲಿ ಅಭಿವೃದ್ಧಿ ಆಗಿದೆ ಆ ಜಾಗಗಳನ್ನು ಜಿಬಿಎ ವ್ಯಾಪ್ತಿಗೆ ಸೇರಿಸಲು ಸಮಿತಿ ರಚಿಸಿ ಯಾವ ಪ್ರದೇಶ ಸೇರಿಸಬೇಕು ಎಂದು ತೀರ್ಮಾನ ಮಾಡಲಾಗುವುದು ಎಂದರು.
ಬೀದಿ ವ್ಯಾಪಾರಿಗಳಿಂದ ಸಂಚಾರ ದಟ್ಟಣೆ ಹೆಚ್ಚಾಗಿದೆ ಎಂದು ಪರಿಷತ್ ಸದಸ್ಯ ಗೋವಿಂದರಾಜು ಹೇಳಿದಾಗ ಇದಕ್ಕೆ ಪ್ರತಿಕ್ರಿಯಿಸಿ, ಈ ವಿಚಾರವಾಗಿ ಸುದೀರ್ಘ ಚರ್ಚೆ ನಡೆಯುತ್ತಿದೆ. ಬೀದಿ ವ್ಯಾಪಾರಿಗಳ ನೋಂದಣಿ ಪ್ರಕ್ರಿಯೆ ಆರಂಭಿಸಿದ್ದು, 30 ಸಾವಿರ ಬೀದಿ ವ್ಯಾಪಾರಿಗಳು ನೋಂದಣಿಯಾಗಿದ್ದಾರೆ. ಅವರಿಗೆ ನಾಲ್ಕು ರೀತಿಯ ವಾಹನ ನೀಡಲು ಸಿದ್ಧತೆ ಮಾಡುತ್ತಿದ್ದು, ಈ ವಾಹನಗಳಲ್ಲಿ ವ್ಯಾಪಾರ ಮಾಡಲು ಅವಕಾಶ ಕಲ್ಪಿಸಲಾಗುವುದು ಎಂದು ಹೇಳಿದರು.



