“ಎರಡು ವರ್ಷದೊಳಗಿನ ಮಕ್ಕಳಿಗೆ ಕೆಮ್ಮು-ಶೀತ ಅನಗತ್ಯ ಔಷಧ ಬೇಡ: ಡಿಜಿಎಚ್‌ಎಸ್”

ಬೆಂಗಳೂರು: ಕೆಮ್ಮು ಹಾಗೂ ಶೀತಕ್ಕೆ ಸಂಬಂಧಿಸಿದಂತೆ ಎರಡು ವರ್ಷದೊಳಗಿನ ಮಕ್ಕಳಿಗೆ ಔಷಧ ಶಿಫಾರಸು ಮಾಡಬಾರದು ಎಂದು ಕೇಂದ್ರ ಸರ್ಕಾರದ ಆರೋಗ್ಯ ಸೇವೆಗಳ ಮಹಾನಿರ್ದೇಶನಾಲಯ (ಡಿಜಿಎಚ್‌ಎಸ್) ಸೂಚಿಸಿದೆ. ಐದು ವರ್ಷದೊಳಗಿನ ಮಕ್ಕಳಿಗೂ ಸಾಮಾನ್ಯವಾಗಿ ಈ ರೀತಿಯ ಔಷಧ ಅಗತ್ಯವಿಲ್ಲ. ಆದರೆ ಅತಿ ಅಗತ್ಯವಿದ್ದಲ್ಲಿ ಮಾತ್ರ ಸೂಕ್ತ ಪ್ರಮಾಣದಲ್ಲಿ ಹಾಗೂ ಕಡಿಮೆ ಅವಧಿಗೆ ಮಾತ್ರ ನೀಡಬೇಕು ಎಂದು ಮಾರ್ಗಸೂಚಿ ತಿಳಿಸಿದೆ.

ಕೇಂದ್ರ ಆರೋಗ್ಯ ಸೇವೆಗಳ ಮಹಾನಿರ್ದೇಶನಾಲಯ (ಡಿಜಿಎಚ್‌ಎಸ್) ಎಲ್ಲ ರಾಜ್ಯಗಳ ಆರೋಗ್ಯ ಇಲಾಖೆಯ ನಿರ್ದೇಶಕರಿಗೆ ಪತ್ರ ಬರೆದು ಮಾರ್ಗಸೂಚಿ ನೀಡಿದೆ. ಮಕ್ಕಳಲ್ಲಿ ಕೆಮ್ಮಿಗೆ ಸಂಬಂಧಿಸಿದಂತೆ ಔಷಧಗಳನ್ನು ವೈದ್ಯರು ವಿವೇಚನೆಯಿಂದ ಮಾತ್ರ ಶಿಫಾರಸು ಮಾಡಬೇಕು ಎಂದು ತಿಳಿಸಿದೆ. ಬಹುತೇಕ ಮಕ್ಕಳ ಕೆಮ್ಮು ಸ್ವತಃ ಕಡಿಮೆಯಾಗುವುದರಿಂದ ಅನಗತ್ಯ ಔಷಧ ಬಳಕೆ ತಪ್ಪಿಸಲು ಸೂಚಿಸಲಾಗಿದೆ. ಜನರಲ್ಲಿ ಜಾಗೃತಿ ಮೂಡಿಸಿ, ವೈದ್ಯರ ಸಲಹೆಗಳನ್ನು ಮಾತ್ರ ಪಾಲಿಸಬೇಕು ಎಂದು ಸೂಚನೆ ನೀಡಲಾಗಿದೆ.

ಕೆಮ್ಮಿನ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಪ್ರಮಾಣದಲ್ಲಿ ದ್ರವ ಆಹಾರ ಸೇವನೆ, ವಿಶ್ರಾಂತಿ ಮತ್ತು ಇತರೆ ಚಿಕಿತ್ಸಾ ಕ್ರಮಗಳನ್ನು ಅನುಸರಿಸಬೇಕು. ಈ ಬಗ್ಗೆ ಜಿಲ್ಲಾ ಆರೋಗ್ಯ ಪ್ರಾಧಿಕಾರಗಳು ಸರ್ಕಾರಿ ಆರೋಗ್ಯ ಕೇಂದ್ರಗಳು, ಔಷಧ ಮಳಿಗೆಗಳಲ್ಲಿ ಜಾಗೃತಿ ಮೂಡಿಸಬೇಕು’ ಎಂದು ಹೇಳಿದೆ.