‘ಕಾಂತಾರ ಚಾಪ್ಟರ್​ 1’ ನೋಡಿದವರಿಂದ ಪ್ರಶಂಸೆಯ ಸುರಿಮಳೆ

ಕೊನೆಗೂ ಕಾತರಕ್ಕೆ ಫುಲ್​ಸ್ಟಾಪ್​ ಬಿದ್ದಿದೆ. ಇಡೀ ಭಾರತೀಯ ಚಿತ್ರರಂಗವೇ ಎದುರು ನೋಡುತ್ತಿದ್ದ ಬಹುನಿರೀಕ್ಷಿತ ಚಿತ್ರ ‘ಕಾಂತಾರ ಚಾಪ್ಟರ್ 1’ ವಿಶ್ವಾದ್ಯಂತ 30ಕ್ಕೂ ಹೆಚ್ಚು ದೇಶಗಳಲ್ಲಿ ಅದ್ಧೂರಿಯಾಗಿ ತೆರೆಕಂಡಿದೆ. ಡಿವೈನ್​ ಸ್ಟಾರ್ ಖ್ಯಾತಿಯ ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿದ 2022ರ ಬ್ಲಾಕ್‌ಬಸ್ಟರ್ ‘ಕಾಂತಾರ’ದ ಪ್ರೀಕ್ವೆಲ್​​​ ಆಗಿರುವ ಕಾಂತಾರ ಚಾಪ್ಟರ್​ 1 ಈಗಾಗಲೇ ಎಕ್ಸ್​ ನಲ್ಲಿ ಪ್ರೇಕ್ಷಕರಿಂದ ಅದ್ಭುತ ಪ್ರತಿಕ್ರಿಯೆಗಳನ್ನು ಸ್ವೀಕರಿಸುತ್ತಿದೆ.

ಭರ್ಜರಿ ಅಡ್ವಾನ್ಸ್​ ಬುಕಿಂಗ್ ಮತ್ತು ಬಿಡುಗಡೆಗೂ ಮುನ್ನ ನಡೆದ ಭಾರಿ ಪ್ರಚಾರದೊಂದಿಗೆ ಸಿನಿಮಾ ಗ್ರ್ಯಾಂಡ್​ ರಿಲೀಸ್​ ಕಂಡಿದೆ. ಕನ್ನಡ ಚಿತ್ರರಂಗದ ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಮಟ್ಟದ ಕಲೆಕ್ಷನ್​​ ಮಾಡೋ ನಿರೀಕ್ಷೆಯಿದೆ. ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ವಿಜಯ್ ಕಿರಗಂದೂರು ಮತ್ತು ಚಲುವೆ ಗೌಡ ಅವರು ಬಂಡವಾಳ ಹೂಡಿರುವ ಕಾಂತಾರ ಚಾಪ್ಟರ್​ 1 ಪೌರಾಣಿಕ ಸಂಪ್ರದಾಯಗಳು ಮತ್ತು ಮೂಲ ಚಿತ್ರದಲ್ಲಿ ಪರಿಚಯಿಸಲಾದ ಪೂರ್ವಜರ ವಿವಾದಗಳ ಮೂಲವನ್ನು ಅನ್ವೇಷಿಸುತ್ತದೆ.

ರಿಷಬ್​ ಶೆಟ್ಟಿ ಜೊತೆಗೆ ಚಿತ್ರದಲ್ಲಿ ರುಕ್ಮಿಣಿ ವಸಂತ್, ಗುಲ್ಶನ್ ದೇವಯ್ಯ, ಜಯರಾಮ್, ಪ್ರಮೋದ್ ಶೆಟ್ಟಿ ಸೇರಿ ಹಲವರು ನಟಿಸಿದ್ದಾರೆ. ಈಗಾಗಲೇ ಸಿನಿಮಾ ನೋಡಿದವರು ಸೋಷಿಯಲ್​ ಮೀಡಿಯಾದಲ್ಲಿ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ.

ಸಾಮಾಜಿಕ ಜಾಲತಾಣ ಬಳಕೆದಾರರೋರ್ವರು ಪ್ರತಿಕ್ರಿಯಿಸಿ, “ಎಕ್ಸಲೆಂಟ್​ ಸೆಕೆಂಡ್​ ಹಾಫ್​​. ದ್ವಿತೀಯಾರ್ಧ ನೋಡಲು ಯೋಗ್ಯವಾಗಿದೆ. ಯೋಗ್ಯ ಸಿನಿಮಾ. ದ್ವಿತೀಯಾರ್ಧದಲ್ಲಿ ರಿಷಬ್​ ಶೆಟ್ಟಿ ಅವರು ಕಥೆಯನ್ನು ಅದ್ಭುತವಾಗಿ ನಿಭಾಯಿಸಿದ್ದಾರೆ. ಒಟ್ಟಾರೆಯಾಗಿ, ಗುಡ್​ ಟು ವಾಚ್​. ಸಿನಿಮಾದ ಸೆಕೆಂಡ್​ ಹಾಫ್​​​​ ನಿಮ್ಮನ್ನು ನಿರಾಶೆಗೊಳಿಸುವುದಿಲ್ಲ. ಇದು ಕಾಂತಾರದಂತೆಯೇ ಇರುತ್ತದೆ. ಆದರೆ ನೋಡಲು ಯೋಗ್ಯ ಸಿನಿಮಾ” ಎಂದು ಬರೆದಿದ್ದಾರೆ.

ಮತ್ತೊಬ್ಬರು, ಚಿತ್ರದ ಟೆಕ್ನಿಕಲ್​ ಬ್ರಿಲಿಯನ್ಸ್​​ ಬಗ್ಗೆ ಉತ್ತಮ ಅಭಿಪ್ರಾಯ ವ್ಯಕ್ತಪಡಿಸುತ್ತಾ, “ಸಂಗೀತ ಮತ್ತು ಕ್ಯಾಮರಾ ವರ್ಕ್​ ಎದ್ದು ಕಾಣುತ್ತದೆ. ಮೊದಲಾರ್ಧ ಚೆನ್ನಾಗಿದೆ. ವಿಶೇಷವಾಗಿ ಮೊದಲ 15 ನಿಮಿಷಗಳು ಅದ್ಭುತ” ಎಂದು ಪೋಸ್ಟ್ ಮಾಡಿದ್ದಾರೆ.