ಬೆಂಗಳೂರು: ರಾಜ್ಯ ಸರ್ಕಾರ ಸಿನಿಮಾ ಟಿಕೆಟ್ ದರ ಗರಿಷ್ಠ ₹200 ನಿಗದಿಪಡಿಸಿದ ಆದೇಶಕ್ಕೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ. ನ್ಯಾಯಮೂರ್ತಿ ರವಿ ಹೊಸಮನಿ ಅವರ ಪೀಠ ತಾತ್ಕಾಲಿಕ ತಡೆ ನೀಡಿದ್ದು, ವಿಚಾರಣೆಯನ್ನು ಮುಂದೂಡಿದೆ. ಮಲ್ಟಿಪ್ಲೆಕ್ಸ್ ಸೇರಿ ರಾಜ್ಯದ ಎಲ್ಲಾ ಚಿತ್ರಮಂದಿರಗಳಲ್ಲಿ ಏಕರೂಪ ದರ ಜಾರಿಗೊಳಿಸಲು ಹೊರಡಿಸಿದ “ಕರ್ನಾಟಕ ಸಿನಿಮಾ ನಿಯಂತ್ರಣ (ತಿದ್ದುಪಡಿ) ನಿಯಮಗಳು-2025” ವಿರುದ್ಧ ಹೊಂಬಾಳೆ ಫಿಲ್ಮ್ಸ್, ಮಲ್ಟಿಪ್ಲೆಕ್ಸ್ ಅಸೋಸಿಯೇಷನ್, ಪಿವಿಆರ್ ಐನಾಕ್ಸ್ ಷೇರುದಾರರು ಸೇರಿದಂತೆ ಹಲವಾರು ಸಂಸ್ಥೆಗಳು ಅರ್ಜಿ ಸಲ್ಲಿಸಿದ್ದವು.

ಸರ್ಕಾರ ಏಕಪಕ್ಷೀಯವಾಗಿ ನಿಯಮ ಜಾರಿಗೆ ತಂದಿದ್ದು ಕಾನೂನುಬಾಹಿರ, ಸಿನಿಮಾ ನಿರ್ಮಾಣಕ್ಕೆ ಕೋಟ್ಯಂತರ ಹೂಡಿಕೆ ಮತ್ತು ಶ್ರಮ ಅಗತ್ಯವಿದೆ, ಗ್ರಾಹಕನಿಗೆ ಚಿತ್ರ ವೀಕ್ಷಣೆಯ ನಿರ್ಧಾರ ಬಿಟ್ಟಿರಬೇಕು ಎಂದು ಅರ್ಜಿದಾರರು ವಾದಿಸಿದರು. ಅರ್ಜಿದಾರರು ಹಾಗೂ ಸರ್ಕಾರದ ಪರ ವಕೀಲರ ವಾದ-ಪ್ರತಿವಾದ ಆಲಿಸಿದ ಹೈಕೋರ್ಟ್, ಆದೇಶಕ್ಕೆ ತಾತ್ಕಾಲಿಕ ತಡೆ ನೀಡಿದೆ.
