“ಅನರ್ಹ ಬಿಪಿಎಲ್ ಕಾರ್ಡ್‌ಗಳಿಗೆ ರದ್ದು ಮಾಡುವ ಪ್ರಶ್ನೆಯೇ ಇಲ್ಲ – ಕೆ.ಹೆಚ್. ಮುನಿಯಪ್ಪ”

ಬೆಂಗಳೂರು: ಅನರ್ಹ ಬಿಪಿಎಲ್ ಕಾರ್ಡ್‌ಗಳನ್ನು ರದ್ದು ಮಾಡುವ ಪ್ರಶ್ನೆಯೇ ಇಲ್ಲ, ಬದಲಾಗಿ ಎಲ್ಲಾ ಕಾರ್ಡ್‌ಗಳನ್ನೂ ಪರಿಶೀಲಿಸಿ ಪರಿಷ್ಕರಣೆ ಮಾಡಲಾಗುತ್ತದೆ ಎಂದು ಆಹಾರ ಸಚಿವ ಕೆ.ಹೆಚ್. ಮುನಿಯಪ್ಪ ತಿಳಿಸಿದ್ದಾರೆ.

ನಗರದಲ್ಲಿ ಮಾಧ್ಯಮದವರೊಂದಿಗೆ ಅನರ್ಹ ರೇಷನ್ ಕಾರ್ಡ್‌ಗಳ ರದ್ದು ವಿಚಾರವಾಗಿ ಮಾತನಾಡಿದ ಅವರು, ಬಿಪಿಎಲ್‌ನಲ್ಲಿರುವ ಅನರ್ಹರನ್ನು ನಿಯಮಗಳ ಪ್ರಕಾರ ಪರಿಷ್ಕರಣೆ ಮಾಡಿ, ಎಪಿಎಲ್‌ಗೆ ವರ್ಗಾವಣೆ ಮಾಡುತ್ತೇವೆ. ಯಾವ ಕಾರ್ಡನ್ನು ರದ್ದು ಮಾಡಲ್ಲ, ಎಲ್ಲಾ ಕಾರ್ಡ್‌ಗಳನ್ನು ಪರಿಷ್ಕರಣೆ ಮಾಡುತ್ತೇವೆ. ವರ್ಗಾವಣೆ ಸಂದರ್ಭದಲ್ಲಿ ಏನಾದರೂ ಸಣ್ಣಪುಟ್ಟ ಸಮಸ್ಯೆಯಾದರೆ 24 ಗಂಟೆಯೊಳಗೆ ಅದನ್ನು ಸರಿಪಡಿಸಿ ಆಹಾರ ಧಾನ್ಯ ಕೊಡುವ ಕೆಲಸ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

ಇದೇ ವೇಳೆ ಯಾದಗಿರಿಯಲ್ಲಿ ಅನ್ನಭಾಗ್ಯ ಅಕ್ಕಿಯ ಅಕ್ರಮ ಸಾಗಣೆ ಪ್ರಕರಣ ಕುರಿತು ಮಾತನಾಡಿದ ಮುನಿಯಪ್ಪ, ವಿಷಯವನ್ನು ವಿವರವಾಗಿ ತನಿಖೆ ಮಾಡಲಾಗುತ್ತದೆ. ಇದು ದೊಡ್ಡ ಮಟ್ಟದಲ್ಲಿ ನಡೆದಿದ್ದು, ಅಧಿಕಾರಿಗಳು ಸಮಗ್ರ ತನಿಖೆ ನಡೆಸಲಿದ್ದಾರೆ. ತಪ್ಪು ಮಾಡಿದವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದರು.