ಕಲಬುರಗಿ, ಸೆಪ್ಟೆಂಬರ್ 5: ಸಚಿವ ಪ್ರಿಯಾಂಕ್ ಖರ್ಗೆ ತವರಾದ ಕಲಬುರಗಿಯ ಜೇವರ್ಗಿ ಹಾಗೂ ಯಡ್ರಾಮಿ ತಾಲೂಕಿನಲ್ಲಿ ರೈತ ಸಂಪರ್ಕ ಕೇಂದ್ರಗಳೇ ರೈತರನ್ನು ವಂಚಿಸುತ್ತಿರುವುದು ಬೆಳಕಿಗೆ ಬಂದಿದೆ. ಎರಡು ವರ್ಷದ ಹಿಂದೆಯೇ ಅವಧಿ ಮೀರಿದ ಕ್ರಿಮಿನಾಶಕಗಳನ್ನು ರೈತರಿಗೆ ಮಾರಾಟ ಮಾಡುತ್ತಿರುವ ಘಟನೆ ಸ್ಥಳೀಯ ರೈತರ ಆಕ್ರೋಶಕ್ಕೆ ಕಾರಣವಾಗಿದೆ.ಈ ಕುರಿತಾಗಿ ಹಸಿರು ಸೇನೆ ರೈತ ಸಂಘದ ಮುಖಂಡರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರೈತರಿಗೆ ಮೋಸ ಮಾಡಿದ ರೈತ ಸಂಪರ್ಕ ಕೇಂದ್ರದ ಸಿಬ್ಬಂದಿ ಹಾಗೂ ಅಂಗಡಿ ಮಾಲೀಕರ ವಿರುದ್ಧ ತಕ್ಷಣ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಅಲ್ಲದೆ, ಅವಧಿ ಮೀರಿದ ಕ್ರಿಮಿನಾಶಕಗಳನ್ನು ಕೂಡಲೇ ವಶಕ್ಕೆ ಪಡೆಯುವಂತೆ ಒತ್ತಾಯಿಸಿದ್ದಾರೆ.ಇಷ್ಟೆಲ್ಲಾ ನಡೆಯುತ್ತಿರುವಾಗಲೂ ಕೃಷಿ ಸಚಿವರು ಸಂಪೂರ್ಣ ಕಾಣೆಯಾಗಿದ್ದಾರೆಂದು ಸಂಘದ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಫಜಲಪುರ ತಾಲ್ಲೂಕಿನ ಗಾಣಗಾಪುರದಲ್ಲಿ ಶ್ರೀ ರೇವಣಸಿದ್ದೇಶ್ವರ ಅಗ್ರೋ ಏಜೆನ್ಸಿ ಫರ್ಟಿಲೈಸರ್ ಅಂಗಡಿ ಮಾಲೀಕ ಗೊಬ್ಬರವನ್ನು ಎಂಆರ್‌ಪಿ ದರಕ್ಕಿಂತ ದ್ವಿಗುಣಕ್ಕೆ ಮಾರಾಟ ಮಾಡುತ್ತಿದ್ದಾನೆ. ರೈತರಿಗೆ ನಕಲಿ ಬಿಲ್ ನೀಡಿದ ಪ್ರಕರಣದ ವೀಡಿಯೋ ವೈರಲ್ ಆಗುತ್ತಿದ್ದಂತೆಯೇ ಕೃಷಿ ಇಲಾಖೆ ದಾಳಿ ನಡೆಸಿ ಮಾಲೀಕನಿಗೆ ನೋಟಿಸ್ ಜಾರಿಗೊಳಿಸಿದೆ.
ದುಪ್ಪಟ್ಟು ದರಕ್ಕೆ ಗೊಬ್ಬರ ಮಾರಾಟ ಮಾಡಿದ ಫರ್ಟಿಲೈಸರ್ ಅಂಗಡಿ, ಅವಧಿ ಮೀರಿದ ಔಷಧಿ ನೀಡಿದ ರೈತ ಸಂಪರ್ಕ ಕೇಂದ್ರ – ಇಬ್ಬರ ಮೇಲೂ ಕೃಷಿ ಇಲಾಖೆ ತಕ್ಷಣ ಕಠಿಣ ಕ್ರಮ ಕೈಗೊಳ್ಳಬೇಕು.
