ಪ್ರಾಥಮಿಕ ಶಾಲಾ ಶಿಕ್ಷಕರಾಗಿ 32 ವರ್ಷಗಳ ಸೇವೆ ಸಲ್ಲಿಸಿದ ಪಿ.ಆರ್. ನಾಯ್ಕ ಅವರು ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಮಕ್ಕಳ ಸ್ನೇಹಿ ಶಿಕ್ಷಕರಾಗಿ ಹಲವು ನವೀನ ಕಾರ್ಯಚಟುವಟಿಕೆಗಳನ್ನು ರೂಪಿಸಿ ಜಿಲ್ಲೆಯ ಮಾದರಿಯಾದರು. ರಾಜ್ಯಮಟ್ಟದ ಸಂಪನ್ಮೂಲ ವ್ಯಕ್ತಿಯಾಗಿ 30ಕ್ಕೂ ಹೆಚ್ಚು ತರಬೇತಿಗಳಲ್ಲಿ ಸಹಸ್ರಾರು ಶಿಕ್ಷಕರಿಗೆ ಮಾರ್ಗದರ್ಶನ ನೀಡಿದರು.

ನಲಿ-ಕಲಿ ವಿದ್ಯಾರ್ಥಿಗಳಿಗೆ ಪಾಠ–ನಾಟಕ ಅಳವಡಿಸಿದ ಜಿಲ್ಲೆಯ ಏಕೈಕ ಶಿಕ್ಷಕರಾಗಿದ್ದಾರೆ. “ನಮ್ಮಕ್ಳು” ಯೂಟ್ಯೂಬ್ ಚಾನೆಲ್ ಮೂಲಕ ಇ-ಸಂಪನ್ಮೂಲಗಳನ್ನು ಸೃಜಿಸಿ ಮಕ್ಕಳ ಕಲಿಕೆಗೆ ಒತ್ತು ನೀಡಿದರು. 200ಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯಿಸಿ ಪಾಠ ನಾಟಕಗಳಿಗೆ ನಿರ್ದೇಶಕರಾಗಿದ್ದಾರೆ. ಕೋವಿಡ್ ಅವಧಿಯಲ್ಲಿ ಕಲಿಕಾ ಕಿಟ್ ತಯಾರಿಸಿ ಮಕ್ಕಳಿಗೆ ತಲುಪಿಸಿದ ಕಾರಣ ಮಕ್ಕಳ ಹಕ್ಕು ಆಯೋಗದಿಂದ ಪ್ರಶಂಸಾ ಪತ್ರ ಪಡೆದಿದ್ದಾರೆ. ಸಾಹಿತ್ಯದಲ್ಲಿಯೂ ಮುಂಚೂಣಿಯಲ್ಲಿ ನಿಂತು 25ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿ ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಚೈತನ್ಯ ಮಾದರಿ ಕೋಣೆ, ಪುಟಾಣಿ ವಿಜ್ಞಾನ ಯೋಜನೆ, ಚಿಣ್ಣರ ರಂಗ ನಾಟಕ ತಂಡಗಳ ಮೂಲಕ ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ ಮೂಡಿಸಿದ್ದಾರೆ. ಮೂರು ದಶಕಗಳ ಸೇವೆಯಿಂದ ಮಕ್ಕಳ ಪ್ರತಿಭೆಗೆ ಸಾಣೆ ಹಿಡಿದ ಪಿ.ಆರ್. ನಾಯ್ಕರಿಗೆ ದೊರೆತ ಈ ರಾಜ್ಯಮಟ್ಟದ ಪ್ರಶಸ್ತಿ ಇಡೀ ಶಿಕ್ಷಕ ಸಮುದಾಯಕ್ಕೆ ಗೌರವ ತಂದಿದೆ.

