ಹೊಸೂರು ರಸ್ತೆಯಲ್ಲಿ ಸಂಚಾರ ಸುಗಮ ಮಾಡಿದ ಮೆಟ್ರೋ ಯೆಲ್ಲೋ ಲೈನ್

ಬೆಂಗಳೂರು, ಆಗಸ್ಟ್ 20: ಬೆಂಗಳೂರು ಮೆಟ್ರೋದ ಹಳದಿ ಮಾರ್ಗ ಚಾಲನೆಯಾದ ಬಳಿಕ ಹೊಸೂರು ರಸ್ತೆಯ ಸಂಚಾರ ದಟ್ಟಣೆ ಗಮನಾರ್ಹವಾಗಿ ಇಳಿಕೆಯಾಗಿದೆ. ಆಗಸ್ಟ್ 10ರಂದು ಪ್ರಧಾನಿ ನರೇಂದ್ರ ಮೋದಿ 19 ಕಿ.ಮೀ ಉದ್ದದ ಆರ್‌ವಿ ರಸ್ತೆ–ಬೊಮ್ಮಸಂದ್ರ ಮಾರ್ಗಕ್ಕೆ ಚಾಲನೆ ನೀಡಿದ್ದರು. ಕೆಲವೇ ದಿನಗಳಲ್ಲಿ ಹೊಸೂರು ರಸ್ತೆಯ ಸಂಚಾರ ದಟ್ಟಣೆ ಶೇ. 10ರಷ್ಟು ಕಡಿಮೆಯಾಗಿದೆ ಎಂದು ವರದಿಯಾಗಿದೆ. ವಿಶೇಷವಾಗಿ ಸಿಲ್ಕ್ ಬೋರ್ಡ್ ಜಂಕ್ಷನ್‌ ಭಾಗದಲ್ಲಿ ಟ್ರಾಫಿಕ್ ತೀವ್ರತೆಗೆ ಇದು ದೊಡ್ಡ ಮಟ್ಟದಲ್ಲಿ ಪರಿಹಾರ ನೀಡಿದೆ.

‘ದಿ ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ಪ್ರಕಾರ, ಯೆಲ್ಲೋ ಲೈನ್ ಚಾಲನೆಯಾದ ನಂತರ ಹೊಸೂರು ರಸ್ತೆಯ ಪೀಕ್ ಅವರ್‌ಗಳಲ್ಲಿ (ಸಂಜೆ 4–ರಾತ್ರಿ 9) ಸಂಚಾರ ದಟ್ಟಣೆ ಶೇ. 32ರಷ್ಟು ಇಳಿಕೆಯಾಗಿದೆ. ಆಗಸ್ಟ್ 12ರ ವೇಳೆಗೆ ಬೆಳಿಗ್ಗೆಯೂ ಟ್ರಾಫಿಕ್ ಹಿಂದಿನ ದಿನಗಳಿಗೆ ಹೋಲಿಸಿದರೆ ಶೇ. 22ರಷ್ಟು ಕಡಿಮೆಯಾಗಿದೆ.

ಕಚೇರಿಗೆ ತೆರಳುವವರ ಪೈಕಿ ಹೆಚ್ಚಿನವರು ಮೆಟ್ರೋ ಸೇವೆ ಬಳಸಲು ಮುಂದಾದ್ದರಿಂದ ಈ ಬದಲಾವಣೆ ಕಂಡುಬಂದಿದೆ. ಒಟ್ಟಾರೆ ಶೇ. 10ರಷ್ಟು ಸಂಚಾರ ದಟ್ಟಣೆ ಇಳಿಕೆಯಾಗಿದೆ.